IPL 2025: GT ವಿರುದ್ಧ CSK ಭರ್ಜರಿ ಜಯ, ಗೆಲುವಿನೊಂದಿಗೆ MS Dhoni ಪಡೆಯ ಜರ್ನಿ ಅಂತ್ಯ; RCB ಮಹತ್ವದ ಲಾಭ!
ಅಹ್ಮದಾಬಾದ್: ಹಾಲಿ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ಮೂಲಕ ಕುಖ್ಯಾತಿಗೆ ಗುರಿಯಾಗಿದ್ದ 6 ಬಾರಿ ಚಾಂಪಿಯನ್ ಚೆನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯ ತನ್ನ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದೆ.
ಇಂದು ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 83 ರನ್ ಗಳ ಅಂತರದಲ್ಲಿ ಮಣಿಸಿ ಭರ್ಜರಿ ಗೆಲುವು ಸಾಧಿಸಿದೆ.
ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 230 ರನ್ ಪೇರಿಸಿತು. ಚೆನ್ನೈ ಪರ ಆಯುಷ್ ಮಾತ್ರೆ 34 ರನ್, ಡೆವಾನ್ ಕಾನ್ವೆ 52 ರನ್, ಉರ್ವಿ ಪಟೇಲ್ 37, ಶಿವಂ ದುಬೆ 17, ಡೆವಾಲ್ಡ್ ಬ್ರೆವಿಸ್ 57 ರನ್ ಗಳಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಆ ಮೂಲಕ ಗುಜರಾತ್ ಗೆ ಗೆಲ್ಲಲು 231 ರನ್ ಗಳ ಬೃಹತ್ ಗುರಿ ನೀಡಿತು.
ಈ ಮೊತ್ತವನ್ನು ಬೆನ್ನು ಹತ್ತಿದ ಗುಜರಾತ್ ತಂಡ 18.3 ಓವರ್ ನಲ್ಲಿ 147 ರನ್ ಗಳಿಗೇ ಆಲೌಟ್ ಆಯಿತು. ಆ ಮೂಲಕ 83 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.
ಗುಜರಾತ್ ಪರ ಆರಂಭಿಕ ಆಟಗಾರ ಸಾಯಿ ಸುದರ್ಶನ್ 41 ರನ್ ಗಳಿಸಿ ಹೋರಾಟ ನೀಡಿದರಾದರೂ ಗುಜರಾತ್ ನ ಉಳಿದ ಆಟಗಾರರಿಂದ ಉತ್ತಮ ಸಾಥ್ ದೊರೆಯಲಿಲ್ಲ. ಉಳಿದಂತೆ ಚೆನ್ನೈ ಪರ ನೂರ್ ಅಹ್ಮದ್ ಮತ್ತು ಅನ್ಶುಲ್ ಕಂಬೋಜ್ ತಲಾ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2 ವಿಕೆಟ್ ಕಬಳಿಸಿದರು. ಉಳಿದಂತೆ ಖಲೀಲ್ ಅಹ್ಮದ್ ಮತ್ತು ಪತಿರಾಣಾ ತಲಾ 1 ವಿಕೆಟ್ ಪಡೆದರು.
RCB ಮಹತ್ವದ ಲಾಭ
ಇನ್ನು ಈ ಪಂದ್ಯದಲ್ಲಿ ಚೆನ್ನೈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಆರ್ ಸಿಬಿ ತಂಡಕ್ಕೆ ಮಹತ್ವದ ಲಾಭವಾಗಿದೆ. ಈ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸೋಲಿಸಿದ್ದು ಮಾತ್ರವಲ್ಲದೇ ಆ ತಂಡದ ಪ್ರಬಲ ನೆಟ್ ರನ್ ರೇಟ್ ಕೂಡ ಇಳಿಕೆ ಮಾಡುವಲ್ಲಿ ಚೆನ್ನೈ ಸಫಲವಾಗಿದೆ. ಇಂದಿನ 83 ರನ್ ಗಳ ಬೃಹತ್ ಸೋಲಿನೊಂದಿಗೆ ಗುಜರಾತ್ ತಂಡದ ನೆಟ್ ರನ್ ರೇಟ್ 0.60ಗೆ ಕುಸಿದಿದೆ. ಇದು ಆರ್ ಸಿಬಿ ಅಂಕಪಟ್ಟಿಯಲ್ಲಿ ಟಾಪ್ 2 ಒಳಗೆ ಬರಲು ನೆರವಾಗುತ್ತದೆ.
ಪ್ರಸ್ತುತ 17 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿರುವ ಆರ್ ಸಿಬಿ ಮುಂದಿನ ಎಲ್ ಎಸ್ ಜಿ ವಿರುದ್ಧದ ಪಂದ್ಯ ಗೆದ್ದರೆ 19 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರುವ ಸಾಧ್ಯತೆ ಇದೆ. ಆದರೆ ಈ ಸ್ಥಿತಿಗೆ ಪಂಜಾಬ್ ತಡೆಯಾಗಿದೆಯಾದರೂ ಮುಂಬೈ ತಂಡ ತನ್ನ ಕೊನೆಯ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಮಣಿಸಬೇಕು. ಆಗ ಆರ್ ಸಿಬಿ ಅಗ್ರಸ್ಥಾನಕ್ಕೇರುತ್ತದೆ. ಮುಂಬೈ 18 ಅಂಕಗಳೊಂದಿಗೆ ಮತ್ತು +1.292 ನೆಟ್ ರನ್ ರೇಟ್ ನೊಂದಿಗೆ 2ನೇ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ