
ಮಾರ್ಚ್ 30ರಂದು ನಡೆದ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಪಂದ್ಯದ ವೇಳೆ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಗಾಯಗೊಂಡಿದ್ದು, ಮೊಣಕೈಯಲ್ಲಿ ಮೂಳೆ ಮುರಿತದಿಂದಾಗಿ ಐಪಿಎಲ್ 2025ನೇ ಆವೃತ್ತಿಯಿಂದಲೇ ಹೊರಗುಳಿದಿದ್ದರು. ನಂತರ ಎಂಎಸ್ ಧೋನಿ ಸಿಎಸ್‌ಕೆ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ಅದಾದ ಬಳಿಕ ಮೈದಾನದಲ್ಲಿ ಕಾಣಿಸಿಕೊಂಡಿದ್ದ ರುತುರಾಜ್ ಅವರನ್ನು ಬೇಕಂತಲೇ ತಂಡದಿಂದ ಹೊರಗೆ ಕೂರಿಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದ್ದವು.
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಗೆಲುವಿನ ಮೂಲಕ ಐಪಿಎಲ್ 2025ರ ಆವೃತ್ತಿಯ ಅಭಿಯಾನವನ್ನು ಮುಗಿಸಿದ್ದು, ಇದೀಗ ರುತುರಾಜ್ ಅವರನ್ನು ಟೂರ್ನಿಯಿಂದ ಹೊರಗೆ ಕಳುಹಿಸಿದ್ದರ ಕುರಿತು ಚರ್ಚೆಗಳು ಆರಂಭವಾಗಿವೆ. ಭಾರತ ಎ ತಂಡದ ಒಂದಷ್ಟು ಆಟಗಾರರು ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು, ಆ ತಂಡದಲ್ಲಿ ರುತುರಾಜ್ ಗಾಯಕ್ವಾಡ್, ಸರ್ಫರಾಜ್ ಖಾನ್, ಯಶಸ್ವಿ ಜೈಸ್ವಾಲ್ ಮತ್ತು ತುಷಾರ್ ದೇಶಪಾಂಡೆ ಅವರಂತಹ ಆಟಗಾರರು ಇದ್ದಾರೆ.
ಭಾರತದ ಯುವ ಕ್ರಿಕೆಟಿಗರು ಇಂಗ್ಲೆಂಡ್‌ಗೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ನಿಂತು ಫೋಟೊ ತೆಗೆಸಿಕೊಂಡಿದ್ದು, ಆ ಚಿತ್ರಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಿಎಸ್‌ಕೆ ಆಟಗಾರ ರುತುರಾಜ್ ಗಾಯಕ್ವಾಡ್ ಐಪಿಎಲ್ 2025ರ ಟೂರ್ನಿಯಿಂದಲೇ ಹೊರಗುಳಿದಿದ್ದರ ಕುರಿತು ಪ್ರಶ್ನಿಸಿದ್ದಾರೆ.
ಗಮನಿಸಬೇಕಾದ ಅಂಶವೆಂದರೆ, CSK ಭಾನುವಾರ GT ವಿರುದ್ಧ IPL 2025ರ ಲೀಗ್ ಹಂತದ ಕೊನೆಯ ಪಂದ್ಯವನ್ನು ಆಡುತ್ತಿದ್ದರೆ, ಅತ್ತ ಗಾಯದ ಕಾರಣದಿಂದಾಗಿ ಹೊರಗುಳಿದಿದ್ದ ಗಾಯಕ್ವಾಡ್ ಭಾರತ ಎ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಗಾಯದಿಂದ ಬಳಲುತ್ತಿದ್ದರೆ, ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ A ತಂಡದೊಂದಿಗೆ ಗಾಯಕ್ವಾಡ್ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಇಂಟರ್ನೆಟ್ ಬಳಕೆದಾರರು ಪ್ರಶ್ನಿಸಿದ್ದಾರೆ.
ಭಾರತ ಎ ತಂಡವು ಹಂತ ಹಂತವಾಗಿ ಇಂಗ್ಲೆಂಡ್‌ಗೆ ತೆರಳಲಿದ್ದು, ಮೊದಲ ಬ್ಯಾಚ್ ಮೇ 25 ರಂದು ಹೊರಟಿದೆ. ತಂಡವು ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಮತ್ತು ಹಿರಿಯ ಭಾರತೀಯ ತಂಡದ ವಿರುದ್ಧ ಒಂದು ಸೇರಿದಂತೆ ಮೂರು ಪಂದ್ಯಗಳನ್ನು ಆಡಲಿದೆ. ಎರಡನೇ ಬ್ಯಾಚ್ ಆಟಗಾರರು ಐಪಿಎಲ್ 2025 ಮುಗಿದ ನಂತರ ಜೂನ್ ಆರಂಭದಲ್ಲಿ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ.
ಭಾರತವು 2025–27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ತಯಾರಿ ನಡೆಸುತ್ತಿರುವಾಗ ಈ ಪ್ರವಾಸವು ನಿರ್ಣಾಯಕವಾಗಿದೆ. ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಿದ್ದು, ದಿಗ್ಗಜ ಬ್ಯಾಟ್ಸ್‌ಮನ್‌ಗಳು ಇಲ್ಲದೆ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.
Advertisement