
ಲಖನೌ ನಲ್ಲಿ ನಡೆದ ಐಪಿಎಲ್ 2025 ರ 70 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಲಖನೌ ತಂಡ ಭಾರಿ ಮುಖಭಂಗ ಎದುರಿಸಿದೆ. ಆತಿಥೇಯ ತಂಡದ ವಿರುದ್ಧ ಆರ್ ಸಿಬಿ 6 ವಿಕೆಟ್ ಗಳ ಅಂತರದಿಂದ ಗೆಲುವನ್ನು ತನ್ನದಾಗಿಸಿಕೊಂಡಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿ ತಂಡದ ವಿರುದ್ಧ ಲಖನೌ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಗಳ ಉತ್ತಮ ಮೊತ್ತದ ಸ್ಕೋರ್ ದಾಖಲಿಸಿತು. ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಕೇವಲ 37 ಎಸೆತಗಳಲ್ಲಿ 67 ರನ್ ಗಳಿಸಿದರೆ, ರಿಷಭ್ ಪಂತ್ 61 ಎಸೆತಗಳಲ್ಲಿ 118 ರನ್ ಗಳಿಸಿ ತಂಡ ಬೃಹತ್ ಮೊತ್ತ ದಾಖಲಿಸಲು ನೆರವಾದರು.
227 ರನ್ ಗಳ ಟಾರ್ಗೆಟ್ ಚೇಸಿಂಗ್ ನಲ್ಲಿ ಆರ್ ಸಿಬಿಗೆ ಸಾಲ್ಟ್ (19 ಎಸೆತಗಳಲ್ಲಿ 30 ರನ್) ಮತ್ತು ವಿರಾಟ್ ಕೊಹ್ಲಿ (30 ಎಸೆತಗಳಲ್ಲಿ 54 ರನ್) ಗಳಿಸಿ ಉತ್ತಮ ಜೊತೆಯಾಟ ನೀಡಿದರು. ಪಾಟೀದಾರ್ 7 ಎಸೆತಗಳಲ್ಲಿ 14 ರನ್ ಹಾಗೂ ಲಿವಿಂಗ್ಸ್ಟೋನ್ 1 ಎಸೆತ ಎದುರಿಸಿ ಶೂನ್ಯ ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಆದರೆ ಮಯಾಂಕ್ ಅಗರ್ವಾಲ್ (23 ಎಸೆತಗಳಲ್ಲಿ 41 ರನ್) ಹಾಗೂ ಜಿತೇಶ್ ಶರ್ಮಾ (33 ಎಸೆತಗಳಲ್ಲಿ 85 ರನ್) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನ ಮೂಲಕ ಆರ್ ಸಿಬಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.
Advertisement