
ಸೋಮವಾರ ಜೈಪುರದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ನೇ ಆವೃತ್ತಿಯ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಏಳು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಐಪಿಎಲ್ 2025 ರ ಕ್ವಾಲಿಫೈಯರ್ 1 ರಲ್ಲಿ ಸ್ಥಾನ ಪಡೆದಿದೆ. MI ವಿರುದ್ಧದ ಗೆಲುವಿನ ನಂತರ, ಬ್ಯಾಟ್ಸ್‌ಮನ್ ಶಶಾಂಕ್ ಸಿಂಗ್, 2014 ರಿಂದ ಇದೇ ಮೊದಲ ಬಾರಿಗೆ ಫ್ರಾಂಚೈಸಿ ಪ್ಲೇಆಫ್‌ಗೆ ಪ್ರವೇಶಿಸಿದ್ದು, ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಕ್ರೆಡಿಟ್ ಸಲ್ಲುತ್ತದೆ ಎಂದಿದ್ದಾರೆ.
ಕಳೆದ ವರ್ಷ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಿಂದ ಬಿಡುಗಡೆಯಾದ ನಂತರ ಶ್ರೇಯಸ್ ಅಯ್ಯರ್ ಅವರನ್ನು 26.75 ಕೋಟಿ ರೂ.ಗೆ PBKS ಗೆ ಖರೀದಿಸಿತ್ತು. ಮತ್ತೊಂದೆಡೆ, ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡದ ಮುಖ್ಯ ಕೋಚ್ ಆಗಿದ್ದರು. ಅದಾದ ಬಳಿಕ ಪಂಜಾಬ್ ತಂಡಕ್ಕೆ ಆಗಮಿಸಿದರು. ಇದೀಗ ಶ್ರೇಯಸ್ ಅಯ್ಯರ್ ಎರಡು ವಿಭಿನ್ನ ತಂಡಗಳೊಂದಿಗೆ ಸತತ ಎರಡು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಮೊದಲ ನಾಯಕನಾಗುವ ಅವಕಾಶ ಹೊಂದಿದ್ದಾರೆ.
ತಂಡದಲ್ಲಿ ಸಕಾರಾತ್ಮಕ ಸಾಂಸ್ಕೃತಿಕ ಬದಲಾವಣೆಯನ್ನು ತಂದಿದ್ದಕ್ಕಾಗಿ ಪಾಂಟಿಂಗ್ ಮತ್ತು ಶ್ರೇಯಸ್ ಅವರನ್ನು ಶಶಾಂಕ್ ಶ್ಲಾಘಿಸಿದರು. ತಂಡದಲ್ಲಿ ಅತ್ಯಂತ ಹಿರಿಯ ಆಟಗಾರನಾಗಿರುವ ಯುಜ್ವೇಂದ್ರ ಚಹಾಲ್ ಅವರನ್ನು ಕೂಡ ಬಸ್ ಚಾಲಕನಂತೆಯೇ ನಡೆಸಿಕೊಳ್ಳಲಾಗುತ್ತದೆ ಎಂದು ಹೇಳಿದರು.
'ಮೊದಲ ದಿನ, ರಿಕಿ ಪಾಂಟಿಂಗ್ ಮತ್ತು ಶ್ರೇಯಸ್ ಇಬ್ಬರೂ ನಮಗೆ ಹೇಳಿದರು. ಉದಾಹರಣೆಗೆ, ತಂಡದಲ್ಲಿರುವ ಅತ್ಯಂತ ಹಿರಿಯ ಆಟಗಾರ ಯುಜ್ವೇಂದ್ರ ಚಾಹಲ್ ಮತ್ತು ನಮ್ಮ ಬಸ್ ಚಾಲಕನನ್ನು ಒಂದೇ ರೀತಿ ನಡೆಸಿಕೊಳ್ಳಲಾಗುತ್ತಿದೆ. ನನ್ನ ಪ್ರಕಾರ, ಇದು ಒಂದು ಮಹತ್ವದ ವಿಷಯ ಮತ್ತು ಅವರು ಇದನ್ನು ಉಳಿಸಿಕೊಂಡಿದ್ದಾರೆ. ಅವರು ಯುಜ್ವೇಂದ್ರ ಚಾಹಲ್ ಮತ್ತು ನಮ್ಮ ಬಸ್ ಚಾಲಕನಿಗೂ ಅದೇ ಗೌರವ ತೋರಿಸಿದ್ದಾರೆ. ಇದು ತಂಡದ ಬಗ್ಗೆ ಬಹಳಷ್ಟು ಹೇಳುತ್ತದೆ' ಎಂದು ಪಂದ್ಯದ ನಂತರ ಶಶಾಂಕ್ ಹೇಳಿದರು.
ಪಂಜಾಬ್ ಕಿಂಗ್ಸ್ ತಂಡದ ಎಲ್ಲ ಸದಸ್ಯರಲ್ಲಿ ಆತ್ಮ ವಿಶ್ವಾಸ ತುಂಬುವಲ್ಲಿ ಪಾಂಟಿಂಗ್ ಹೇಗೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದನ್ನು ಶಶಾಂಕ್ ಬಹಿರಂಗಪಡಿಸಿದ್ದಾರೆ.
'ಅವರು (ಪಾಂಟಿಂಗ್) ತಂಡದ ಸಂಸ್ಕೃತಿಯನ್ನು ಬದಲಾಯಿಸಿದ್ದಾರೆ. ಅವರು ನಮ್ಮ ಮನಸ್ಥಿತಿಯನ್ನು ಬದಲಾಯಿಸಿದ್ದಾರೆ. ಅವರು ನಮ್ಮ ನಂಬಿಕೆಗಳನ್ನು ಬದಲಾಯಿಸಿದ್ದಾರೆ. ಆದ್ದರಿಂದ, ಆ ಎಲ್ಲ ವಿಷಯಗಳಿಗೆ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಏಕೆಂದರೆ, ನಿಸ್ಸಂಶಯವಾಗಿ, ಆಟದ ಕಡೆಗೆ ನಮ್ಮ ದೃಷ್ಟಿಕೋನವನ್ನು ಬದಲಾಯಿಸಿದವರು ಅವರೇ. ನಾನು ಹೇಳಿದ ಸಂಸ್ಕೃತಿ ಯಾವುದೆಂದರೆ, ಪರಸ್ಪರ ಕಾಳಜಿ ವಹಿಸುವುದು, ಪರಸ್ಪರ ಗೌರವಿಸುವುದಾಗಿದೆ. ನನ್ನ ಪ್ರಕಾರ, ಈ ಎಲ್ಲ ವಿಷಯಗಳನ್ನು ಹೇಳುವುದು ತುಂಬಾ ಸುಲಭ' ಎಂದರು.
'ಖಂಡಿತ, ನೀವು ಇದನ್ನು ಮಾಡಬೇಕು, ನೀವು ಅದನ್ನು ಮಾಡಬೇಕು ಎಂದು ಹೇಳಬಹುದು. ಆದರೆ ಅದನ್ನು ಜಾರಿಗೆ ತರುವುದು ಬೇರೆ ವಿಷಯ. ಆದ್ದರಿಂದ, ಅವರು ಡ್ರೆಸ್ಸಿಂಗ್ ರೂಂ ಒಳಗೆ ಅಂತಹ ಸಂಸ್ಕೃತಿಯು ನಿರ್ಮಾಣವಾಗುವಂತೆ ನೋಡಿಕೊಂಡರು' ಎಂದು ಅವರು ಹೇಳಿದರು.
Advertisement