
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ 2025ನೇ ಆವೃತ್ತಿಯಲ್ಲಿ ಪ್ಲೇಆಫ್‌ನಲ್ಲಿ ಸ್ಥಾನ ಪಡೆದಿದ್ದು, ಗುರುವಾರ ನಡೆಯುವ ಕ್ವಾಲಿಫೈಯರ್ 1ರಲ್ಲಿ ಪಂಜಾಬ್ ಕಿಂಗ್ಸ್ (PBKS) ತಂಡದ ವಿರುದ್ಧ ಸೆಣಸಲಿದೆ. ಇದೀಗ ಆರ್‌ಸಿಬಿ ಹೊಸ ದಾಖಲೆಯನ್ನು ಬರೆದಿದ್ದು, ತವರಿನಿಂದ ಹೊರಗೆ ಆಡಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಜಿತೇಶ್ ಶರ್ಮಾ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಆರ್‌ಸಿಬಿ ತಂಡವು ತವರಿನಿಂದ ಹೊರಗಿನ ಮತ್ತು ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿದೆ. ಆರ್‌ಸಿಬಿ ತಂಡವು ಮೇ 29ರಂದು ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಲಿದೆ.
ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ಮಣಿಸುವ ಮೂಲಕ ಆರ್‌ಸಿಬಿ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿತು. ನಂತರ ಮುಂದಿನ ಎರಡು ಹೊರಗಿನ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳನ್ನು ಸೋಲಿಸುವ ಮೂಲಕ ಭದ್ರಕೋಟೆಯಾಗಿದ್ದ ಚೆಪಾಕ್ ಮತ್ತು ವಾಂಖೆಡೆಯಲ್ಲಿ ವಿಜಯ ಸಾಧಿಸಿತು.
ತವರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಸೋಲು ಕಂಡ ಆರ್‌ಸಿಬಿ ಮತ್ತೆ ಚೇತರಿಸಿಕೊಂಡು ಜೈಪುರದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿತು. ನಂತರ ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಆರ್‌ಸಿಬಿ ವಿರುದ್ಧ ತಮ್ಮ ತವರು ಮೈದಾನದಲ್ಲಿ ಸೋಲು ಕಂಡವು.
ಮಂಗಳವಾರ ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ತವರಿನಿಂದ ಹೊರಗೆ ನಡೆದ ಏಳಕ್ಕೆ ಏಳು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಹೊಸ ದಾಖಲೆ ಬರೆದಿದೆ.
ನಾಯಕ ಜಿತೇಶ್ ಶರ್ಮಾ 33 ಎಸೆತಗಳಲ್ಲಿ ಅಜೇಯ 85 ರನ್ ಗಳಿಸಿ ದಾಖಲೆಯ 228 ರನ್‌ಗಳ ಗುರಿಯನ್ನು ಬೆನ್ನಟ್ಟಲು ತಂಡಕ್ಕೆ ನೆರವಾದರು. ದಿಗ್ವೇಶ್ ರಾಠಿ ಅವರ ಎಸೆತದಲ್ಲಿ ಆಯುಷ್ ಬದೋನಿ ಅವರ ಕೈಗೆ ಚೆಂಡು ಸಿಕ್ಕಾಗ ಜಿತೇಶ್ ಶರ್ಮಾ ಔಟ್ ಎಂದೇ ಭಾವಿಸಲಾಗಿತ್ತು. ಆದರೆ, ದಿಗ್ವೇಶ್ ತಮ್ಮ ಬ್ಯಾಕ್‌ಫೂಟ್‌ನಿಂದ ರಿಟರ್ನ್ ಕ್ರೀಸ್ ಅನ್ನು ದಾಟಿದ್ದರು. ಇದರ ಪರಿಣಾಮವಾಗಿ ನೋ ಬಾಲ್ ಆಯಿತು. ಮುಂದಿನ ಎಸೆತದಲ್ಲಿ, ಜಿತೇಶ್ ಬಾಲ್ ಅನ್ನು ಸ್ಟ್ಯಾಂಡ್‌ಗೆ ತಳ್ಳಿ ಐಪಿಎಲ್‌ನಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಗಳಿಸಿದರು.
ನಂತರ, ರಾಠಿ ಮತ್ತೊಮ್ಮೆ ಜಿತೇಶ್ ಅವರನ್ನು ಮಂಕಡಿಂಗ್ ಮೂಲಕ ಔಟ್ ಮಾಡಿದರು. ಆದರೆ, ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್ ಅವರು ಈ ಅಪೀಲ್ ಅನ್ನು ಹಿಂತೆಗೆದುಕೊಂಡರು. ಪರಿಣಾಮವಾಗಿ, ಆರ್‌ಸಿಬಿ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಯಶಸ್ಸು ಸಾಧಿಸಿತು.
Advertisement