'ಹೇಗಾದರೂ ಸರಿ ಮುಂಬೈ ಫೈನಲ್ ತಲುಪುವುದನ್ನು ನಿಲ್ಲಿಸಿ': ಆರ್ ಅಶ್ವಿನ್ ಸಲಹೆ ನೀಡಿದ್ದೇಕೆ?
ಗುರುವಾರ ನಡೆದ ಕ್ವಾಲಿಫೈಯರ್ 1ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ್ದು, ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸದೆ ಇರಲಿ ಎಂದು ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ. ಕ್ವಾಲಿಫೈಯರ್ 1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿದ ನಂತರ ಆರ್‌ಸಿಬಿ ಫೈನಲ್ ಪ್ರವೇಶಿಸಿದೆ. ಎಂಐ ಮೊದಲು ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ನಂತರ ವಿಜೇತ ತಂಡ ಜೂನ್ 1 ರಂದು ಕ್ವಾಲಿಫೈಯರ್ 2 ರಲ್ಲಿ ಪಿಬಿಕೆಎಸ್ ವಿರುದ್ಧ ಸೆಣಸಲಿದೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್, ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ಗೆ ಮುಂಬೈ ತಲುಪಬಾರದು ಎಂದು ಆರ್‌ಸಿಬಿ ಆಶಿಸುತ್ತಿದೆ ಎಂದಿದ್ದಾರೆ.
ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಆಡಿದ್ದ ಅಶ್ವಿನ್, ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ತಂಡ ಮಾತ್ರ ಆರ್‌ಸಿಬಿಗೆ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಆರ್‌ಸಿಬಿ ಐಪಿಎಲ್ ಗೆಲ್ಲಬೇಕಾದರೆ, ಗುಜರಾತ್ ಟೈಟಾನ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಬೇಕು. ಮುಂಬೈ ತಂಡವು ಫೈನಲ್‌ಗೆ ಪ್ರವೇಶಿಸಬಾರದು ಎಂದು ಆಶಿಸಬೇಕು. ಯಾವುದೇ ಕಾರಣಕ್ಕೂ ನೀವು ಅವರು ಫೈನಲ್ ತಲುಪಲು ಬಿಡಬಾರದು' ಎಂದು ಪ್ಲೇಆಫ್ ವಿಶ್ಲೇಷಣೆಯಲ್ಲಿ ಹೇಳಿದರು.
'ನಾನು ಆರ್‌ಸಿಬಿ ತಂಡದಲ್ಲಿದ್ದರೆ, ಎಂಐ ತಂಡಕ್ಕಿಂತ ಗುಜರಾತ್ ಟೈಟಾನ್ಸ್ ತಂಡವನ್ನು ಫೈನಲ್‌ನಲ್ಲಿ ಎದುರಿಸಲು ಇಷ್ಟಪಡುತ್ತೇನೆ. ರಜತ್ ಪಾಟೀದಾರ್ ನೇತೃತ್ವದ ತಂಡಕ್ಕಿರುವ ನಿಜವಾದ ಬೆದರಿಕೆಯೆಂದರೆ ಅದು ಮುಂಬೈ ಇಂಡಿಯನ್ಸ್ ತಂಡವಾಗಿದೆ. ಆರ್‌ಸಿಬಿ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸದಿರಲು ಎದುರು ನೋಡುತ್ತಿದೆ. ಆರ್‌ಸಿಬಿ ಇದರಿಂದ ದೂರ ಇರುವಂತೆ ಕಾಣುತ್ತಿದೆ. ಆದರೆ, ಇದು ಕ್ರಿಕೆಟ್; ಏನು ಬೇಕಾದರೂ ಆಗಬಹುದು' ಎಂದು ಅವರು ಹೇಳಿದರು.

ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನದ ಬಗ್ಗೆಯೂ ಮಾತನಾಡಿದ ಅಶ್ವಿನ್, ಆರ್‌ಸಿಬಿ ತಾರೆಗೆ ಈ ವರ್ಷ ಎಲ್ಲವೂ ಸರಿಹೊಂದುತ್ತಿರುವಂತೆ ಕಾಣುತ್ತಿದೆ. ಕೊಹ್ಲಿ ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 2024ರಲ್ಲಿ ಟಿ 20 ವಿಶ್ವಕಪ್ ಮತ್ತು ಈ ವರ್ಷದ ಆರಂಭದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಎರಡನ್ನೂ ಗೆದ್ದಿದ್ದಾರೆ ಎಂದರು.
'ನಾನು ನಿಮಗೆಲ್ಲರಿಗೂ ಒಂದು ವಿಷಯ ಹೇಳಲು ಬಯಸುತ್ತೇನೆ. ನಾನು ವಿರಾಟ್ ಕೊಹ್ಲಿ ಬಗ್ಗೆ ಹೇಳಲು ಬಯಸುವುದಿಲ್ಲ, ಆದರೆ ಇದು ಆರ್‌ಸಿಬಿಯ ವರ್ಷ ಎಂದು ನನಗೆ ಅನಿಸದೆ ಇರಲು ಸಾಧ್ಯವಿಲ್ಲ. ಕೊಹ್ಲಿಗೆ ಐಸಿಸಿ ಪ್ರಶಸ್ತಿ ಇಲ್ಲ ಎಂದು ಜನರು ಹೇಳುತ್ತಿದ್ದರು. ಈಗ ಅವರು ಒಂದು ವರ್ಷದೊಳಗೆ ಎರಡು ಪ್ರಶಸ್ತಿಗಳನ್ನು ಹೊಂದಿದ್ದಾರೆ. ನಾಯಕನಾಗಿ ಅಲ್ಲದಿದ್ದರೂ, ಆ ಗೆಲುವುಗಳಲ್ಲಿ ಅವರು ಪ್ರಮುಖರಾಗಿದ್ದಾರೆ. ಅವರು ಭಾರತದ ಶ್ರೇಷ್ಠ ಟೆಸ್ಟ್ ನಾಯಕರಲ್ಲಿ ಒಬ್ಬರು. 18ನೇ ಆವೃತ್ತಿಯಲ್ಲಿ ಸೀಸನ್‌ನಲ್ಲಿ ಆರ್‌ಸಿಬಿಗೆ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲಿದ್ದಾರೆಯೇ? ಅವರು ಫೈನಲ್‌ನಲ್ಲಿ ಚೇಸ್ ಮಾಡುತ್ತಿದ್ದರೆ, ಆ ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕೆಂದು ಕೊಹ್ಲಿಗೆ ತಿಳಿದಿದೆ' ಎಂದು ಅಶ್ವಿನ್ ಹೇಳಿದರು.
ಕ್ವಾಲಿಫೈಯರ್ 1 ರಲ್ಲಿ ಪ್ರಬಲ ಪ್ರದರ್ಶನ ನೀಡುವ ಮೂಲಕ ಆರ್‌ಸಿಬಿ ಫೈನಲ್ ಪ್ರವೇಶಿಸಿತು. ಪಂಜಾಬ್ ಕಿಂಗ್ಸ್ ಅನ್ನು ಕೇವಲ 101ಕ್ಕೆ ಆಲೌಟ್ ಮಾಡಿದ ನಂತರ, ಫಿಲ್ ಸಾಲ್ಟ್ ಅಜೇಯ ಅರ್ಧಶತಕದೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು ಮತ್ತು ಕೇವಲ 10 ಓವರ್‌ಗಳಲ್ಲಿ ಗುರಿ ತಲುಪಲು ಸಹಾಯ ಮಾಡಿದರು. ಆದಾಗ್ಯೂ, ಕೊಹ್ಲಿ ಕೇವಲ 12 ರನ್ ಗಳಿಸುವ ಮೂಲಕ ವಿಕೆಟ್ ಒಪ್ಪಿಸಿದರು.
ಕೊಹ್ಲಿ ಈ ಆವೃತ್ತಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. 15 ಪಂದ್ಯಗಳಲ್ಲಿ 55.82 ಸರಾಸರಿ ಮತ್ತು 146.54 ಸ್ಟ್ರೈಕ್ ರೇಟ್‌ನಲ್ಲಿ 614 ರನ್ ಗಳಿಸಿದ್ದಾರೆ. ಆರ್‌ಸಿಬಿ ಈಗ ಫೈನಲ್‌ನಲ್ಲಿ ಯಾರನ್ನು ಎದುರಿಸುತ್ತದೆ ಎಂಬುದನ್ನು ತಿಳಿಯಲು ಇಂದು ನಡೆಯಲಿರುವ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಪಂದ್ಯಗಳು ನಡೆಯಬೇಕಿದೆ.