
ಬೆಂಗಳೂರು: ಚಂಡೀಗಢದ ಮುಲ್ಲನಪುರದಲ್ಲಿ ನಿನ್ನೆ ನಡೆದ ಐಪಿಎಲ್ 2025 ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಡುವಲ್ಲಿ ಬೆಂಬಲಿಸಿದ ಆರ್ ಸಿಬಿ ಅಭಿಮಾನಿಗಳಿಗೆ ರಜತ್ ಪಾಟಿದಾರ್ ಸಂದೇಶ ನೀಡಿದ್ದಾರೆ.
ಪಂದ್ಯದ ನಂತರದ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಮಾತನಾಡಿದ RCB ನಾಯಕ, ಹೋದಲ್ಲೆಲ್ಲಾ ತಂಡವನ್ನು ಬೆಂಬಲಿಸುತ್ತಿರುವುದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು. ಅಭಿಮಾನಿಗಳನ್ನು ತಂಡವೂ ಪ್ರೀತಿಸುತ್ತಿದೆ. ಇನ್ನೊಂದು ಪಂದ್ಯವಷ್ಟೇ ಎಲ್ಲರೂ ಒಟ್ಟಿಗೆ ಸಂಭ್ರಮಾಚರಣೆ ಮಾಡೋಣ ಎಂದರು.
"ನಾನು ಆರ್‌ಸಿಬಿ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಚಿನ್ನಸ್ವಾಮಿ ಮಾತ್ರವಲ್ಲ, ನಾವು ಎಲ್ಲಿಗೆ ಹೋದರೂ ನಮ್ಮ ತವರಿನಲ್ಲಿದಂತೆ ಭಾಸವಾಗುತ್ತದೆ. ನಾವೆಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ. ಇನ್ನು ಒಂದೇ ಒಂದು ಪಂದ್ಯ ಮಾತ್ರ. ಎಲ್ಲರೂ ಒಟ್ಟಿಗೆ ಆಚರಿಸೋಣ" ಎಂದು ಪಾಟಿದಾರ್ ಹೇಳಿದರು.
ಬೌಲಿಂಗ್ ಪ್ಲಾನ್ ನಿಖರವಾಗಿತ್ತು. ಸುಯಶ್ ಬೌಲಿಂಗ್ ಅದ್ಭುತವಾಗಿತ್ತು. ಅದೇ ರೀತಿ ಪಿಲ್ ಸಾಲ್ಟ್ ಬಗ್ಗೆಯೂ ಕೊಂಡಾಡಿದ ಪಾಟಿದಾರ್, ನಾನು ಅವರ ದೊಡ್ಡ ಅಭಿಮಾನಿ. ಬಹುತೇಕ ಪಂದ್ಯದಲ್ಲಿ ಇದೇ ರೀತಿ ಅವರು ಆಡಿದ್ದಾರೆ ಎಂದು ತಿಳಿಸಿದರು.
ಆರ್ ಸಿಬಿ ಇದೀಗ ಜೂನ್ 3 ರಂದು ಅಹಮದಾಬಾದಿನಲ್ಲಿ ನಡೆಯಲಿರುವ ಫೈನಲ್ ಪಂದ್ಯದತ್ತ ಕಾತುರದಿಂದ ಕಾಯುತ್ತಿದ್ದು, ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯುವ ವಿಶ್ವಾಸದಲ್ಲಿದೆ.
Advertisement