ಕರಾಚಿ: ಇತ್ತೀಚೆಗೆ ನಡೆದ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ರಾಷ್ಟ್ರೀಯ ಮಹಿಳಾ ತಂಡದ ಮುಖ್ಯ ಕೋಚ್ ಮೊಹಮ್ಮದ್ ವಾಸಿಮ್ ಅವರನ್ನು ವಜಾಗೊಳಿಸಿದೆ.
ಏಪ್ರಿಲ್‌ನಲ್ಲಿ ಲಾಹೋರ್‌ನಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನ ಅಗ್ರಸ್ಥಾನ ಪಡೆಯುವ ಮೂಲಕ ಪಂದ್ಯಾವಳಿಯಲ್ಲಿ ಸ್ಥಾನ ಗಳಿಸಿತು. ಆದರೆ, ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ತಂಡವು ಕಳಪೆ ಪ್ರದರ್ಶನ ನೀಡಿತು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಂಟು ತಂಡಗಳ ಪೈಕಿ ಕೊನೆಯ ಸ್ಥಾನದಲ್ಲಿ ಅಭಿಯಾನವನ್ನು ಕೊನೆಗೊಳಿಸಿತು.
ಪಾಕಿಸ್ತಾನ ತನ್ನ ಎಲ್ಲ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಿತ್ತು. ಫಾತಿಮಾ ಸನಾ ನೇತೃತ್ವದ ತಂಡ ನಾಲ್ಕು ಪಂದ್ಯಗಳಲ್ಲಿ ಸೋತರೆ, ಮೂರು ಪಂದ್ಯಗಳು ಮಳೆಯಿಂದಾಗಿ ರದ್ದಾದವು.
ವಿಶ್ವಕಪ್‌ನೊಂದಿಗೆ ವಾಸಿಂ ಅವರ ಒಪ್ಪಂದ ಕೊನೆಗೊಂಡಿದ್ದು, ಮಂಡಳಿಯು ಅದನ್ನು ವಿಸ್ತರಿಸದಿರಲು ನಿರ್ಧರಿಸಿದೆ ಮತ್ತು ಬದಲಿಗೆ ಹೊಸ ಮುಖ್ಯ ಕೋಚ್ ಅನ್ನು ನೇಮಿಸಿದೆ ಎಂದು ಪಿಸಿಬಿ ತಿಳಿಸಿದೆ.
ಟೆಸ್ಟ್ ಮಾಜಿ ಆಟಗಾರ ಹಾಗೂ ಪುರುಷ ತಂಡದ ಮುಖ್ಯ ಆಯ್ಕೆದಾರರಾಗಿಯೂ ಸೇವೆ ಸಲ್ಲಿಸಿರುವ ವಾಸಿಂ ಅವರನ್ನು ಕಳೆದ ವರ್ಷ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ಅವರ ಅಧಿಕಾರಾವಧಿಯಲ್ಲಿ ಪಾಕಿಸ್ತಾನ ತಂಡವು ಏಷ್ಯಾ ಕಪ್ ಸೆಮಿಫೈನಲ್‌ನಲ್ಲಿ ಸೋತು, ನಂತರ ಈ ವರ್ಷದ ಆರಂಭದಲ್ಲಿ ನಡೆದ ಟಿ20 ವಿಶ್ವಕಪ್‌ನ ಲೀಗ್ ಹಂತಗಳಲ್ಲಿಯೇ ಹೊರಬಿತ್ತು.
ಪಿಸಿಬಿ ಇದೀಗ ವಿದೇಶಿ ಕೋಚ್‌ಗಾಗಿ ಹುಡುಕಾಟ ನಡೆಸುತ್ತಿದೆ. ಆದರೆ, ಸೂಕ್ತ ಅಭ್ಯರ್ಥಿ ಸಿಗದಿದ್ದರೆ, ಮಹಿಳಾ ತಂಡದ ಮಾಜಿ ನಾಯಕಿ ಬಿಸ್ಮಾ ಮರೂಫ್ ಅವರಿಗೆ ಆ ಹುದ್ದೆ ಸಿಗಬಹುದು ಎಂದು ವಿಶ್ವಾಸಾರ್ಹ ಮೂಲವೊಂದು ತಿಳಿಸಿದೆ.
ಉಳಿದ ಸಹಾಯಕ ಸಿಬ್ಬಂದಿಯನ್ನು ಕೂಡ ಕೆಲವೇ ದಿನಗಳಲ್ಲಿ ಬದಲಾಯಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
Advertisement