

ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5ನೇ ಹಾಗೂ ಅಂತಿಮ ಟಿ20 ಪಂದ್ಯ ಮಳೆಗಾಹುತಿಯಾಗಿದ್ದು, ಸರಣಿ ಟೀಂ ಇಂಡಿಯಾ ವಶವಾಗಿದೆ.
ಹೌದು.. ಇಂದು ಬ್ರಿಸ್ಬೇನ್ ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ 5ನೇ ಟಿ20 ಪಂದ್ಯ ಮಳೆಗಾಹುತಿಯಾಗಿದ್ದು, ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ರದ್ದಾಗಿದೆ. ಪರಿಣಾಮ 5 ಪಂದ್ಯಗಳ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಂಡಿದೆ.
ಈ ಹಿಂದೆ ಅಕ್ಟೋಬರ್ 29ರಂದು ನಡೆದಿದ್ದ ಸರಣಿಯ ಮೊದಲ ಟಿ20 ಪಂದ್ಯ ಕೂಡ ಮಳೆಗಾಹುತಿಯಾಗಿತ್ತು. ಬಳಿಕ 2ನೇ ಪಂದ್ಯವನ್ನು ಆಸ್ಟ್ರೇಲಿಯಾ 4 ವಿಕೆಟ್ ಅಂತರದಲ್ಲಿ ಗೆದ್ದಿತ್ತು. ಬಳಿಕ ನಡೆದ 3 ಮತ್ತು 4ನೇ ಪಂದ್ಯಗಳನ್ನು ಭಾರತ ಗೆದ್ದುಕೊಂಡಿತ್ತು. ಇದೀಗ ಅಂತಿಮ ಪಂದ್ಯ ಕೂಡ ಮಳೆಗಾಹುತಿಯಾದ ಹಿನ್ನಲೆಯಲ್ಲಿ 5 ಪಂದ್ಯಗಳ ಸರಣಿ ಟೀಂ ಇಂಡಿಯಾ ಪಾಲಾಗಿದೆ.
ಟಾಸ್ ಗೆದ್ದಿದ್ದ ಆಸಿಸ್ ಬೌಲಿಂಗ್ ಆಯ್ಕೆ
ಇನ್ನು ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಇಂದಿನ ಪಂದ್ಯದಲ್ಲಿ ಭಾರತ ಒಂದು ಬದಲಾವಣೆ ಕೂಡ ಮಾಡಿತ್ತು. ತಿಲಕ್ ವರ್ಮಾ ಜಾಗದಲ್ಲಿ ರಿಂಕೂ ಸಿಂಗ್ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು.
ಗಿಲ್-ಅಭಿಷೇಕ್ ಭರ್ಜರಿ ಬ್ಯಾಟಿಂಗ್
ಇನ್ನು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ಶುಭ್ ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಭರ್ಜರಿ ಆರಂಭ ಒದಗಿಸಿದರು. ಅಭಿಷೇಕ್ ಶರ್ಮಾ ಕೇವಲ 13 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 1 ಬೌಂಡರಿ ಸಹಿತ 23 ರನ್ ಗಳಿಸಿದರೆ, ಶುಭ್ ಮನ್ ಗಿಲ್ 16 ಎಸೆತಗಳಲ್ಲಿ 6 ಬೌಂಡರಿ ಸಹಿತ 29 ರನ್ ಗಳಿಸಿದರು.
ಐದನೇ ಓವರ್ ನ ಅಂತಿಮ ಎಸೆತಕ್ಕೂ ಮೊದಲು ಮಳೆ ಬಂದು ಪಂದ್ಯ ಸ್ಥಗಿತವಾಯಿತು.
Advertisement