

ನವದೆಹಲಿ: ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಕೇವಲ ಒಂದು ವರ್ಷದ ಅವಧಿಯಲ್ಲಿ 2ನೇ ಮದುವೆಯಾಗಿದ್ದಾರೆ.
ಹೌದು.. ಅಚ್ಚರಿಯಾದರೂ ಇದು ಸತ್ಯ.. ಆಫ್ಘಾನಿಸ್ತಾನದ ಸ್ಟಾರ್ ಆಟಗಾರ ರಶೀದ್ ಖಾನ್ ತಮ್ಮ 2ನೇ ಮದುವೆ ಕುರಿತು ಸ್ಪಷ್ಟೆನೆ ನೀಡಿದ್ದಾರೆ. ತಮ್ಮ ಗೆಳತಿ ಹಾಗೂ ಅಫ್ಘಾನಿಸ್ತಾನದ ಮಾಡೆಲ್ ರನ್ನು ವಿವಾಹವಾಗಿರುವುದಾಗಿ ರಶೀದ್ ಖಾನ್ ಇನ್ಸ್ಟಾಗ್ರಾಮ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ನೆದರ್‌ಲ್ಯಾಂಡ್ಸ್‌ನಲ್ಲಿ ರಶೀದ್ ಖಾನ್ ಅವರ ದತ್ತಿ ಪ್ರತಿಷ್ಠಾನದ ಉದ್ಘಾಟನೆಯ ಸಂದರ್ಭದಲ್ಲಿ ಆಫ್ಘನ್ ಮೂಲದ ಮಾಡೆಲ್ ಜೊತೆ ರಶೀದ್ ಖಾನ್ ತುಂಬಾ ಆಪ್ತವಾಗಿ ನಡೆದುಕೊಳ್ಳುತ್ತಿದ್ದ ವಿಡಿಯೋ ಮತ್ತು ಫೋಟೋಗಳು ವ್ಯಾಪಕ ವೈರಲ್ ಆಗಿದ್ದವು.
ಅಫ್ಘಾನ್ ಸಮುದಾಯಗಳಿಗೆ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಶುದ್ಧ ನೀರಿನ ಕುರಿತು ಅವರ ಕೆಲಸವನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇಲ್ಲಿ ರಶೀದ್ ಖಾನ್ ಸಾಂಪ್ರದಾಯಿಕ ಅಫಘಾನ್ ಉಡುಪಿನಲ್ಲಿರುವ ಮಹಿಳೆಯ ಪಕ್ಕದಲ್ಲಿ ರಶೀದ್ ಕುಳಿತಿರುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಇದೇ ಕಾರ್ಯಕ್ರಮದ ಫೋಟೋ ಮತ್ತು ವಿಡಿಯೋಗಳ ಕುರಿತು ರಶೀದ್ ಖಾನ್ ಸ್ಪಷ್ಟನೆ ನೀಡಿದ್ದಾರೆ.
ಪೋಸ್ಟ್ ನಲ್ಲೇನಿದೆ?
ರಶೀದ್ ತಮ್ಮ ಎರಡನೇ ಮದುವೆ (ನಿಕಾಹ್) ಕೆಲವು ತಿಂಗಳ ಹಿಂದೆ, ಆಗಸ್ಟ್ 2, 2025 ರಂದು ನಡೆದಿರುವುದನ್ನು ದೃಢಪಡಿಸಿದ್ದಾರೆ. 'ನಾನು ಯಾವಾಗಲೂ ಕನಸು ಕಂಡಿರುವ ಪ್ರೀತಿ, ಶಾಂತಿ ಮತ್ತು ಪಾಲುದಾರಿಕೆಯನ್ನು ಹೊಂದಿರುವ ಮಹಿಳೆಯನ್ನು ವಿವಾಹವಾಗಿರುವುದಾಗಿ ರಶೀದ್ ಖಾನ್ ಬರೆದುಕೊಂಡಿದ್ದಾರೆ.
'ಆಗಸ್ಟ್ 2, 2025 ರಂದು, ನನ್ನ ಜೀವನದಲ್ಲಿ ಹೊಸ, ಅರ್ಥಪೂರ್ಣ ಅಧ್ಯಾಯವನ್ನು ಪ್ರಾರಂಭಿಸಿದೆ. ನಾನು ಯಾವಾಗಲೂ ಕನಸು ಕಂಡಿದ್ದ ಪ್ರೀತಿ, ಶಾಂತಿ ಮತ್ತು ಒಡನಾಟವನ್ನು ಹೊಂದಿರುವ ಮಹಿಳೆಯನ್ನು ನಾನು ಮದುವೆಯಾದೆ. ಇತ್ತೀಚೆಗೆ ನಾನು ನನ್ನ ಹೆಂಡತಿಯನ್ನು ದತ್ತಿ ಕಾರ್ಯಕ್ರಮಕ್ಕೆ ಕರೆದೊಯ್ದೆ. ಅಂತಹ ಸರಳ ವಿಷಯದಿಂದ ಊಹೆಗಳನ್ನು ಮಾಡುವುದು ದುರದೃಷ್ಟಕರ.
ಸತ್ಯವು ತುಂಬಾ ಸರಳವಾಗಿದೆ. ಅವಳು ನನ್ನ ಹೆಂಡತಿ, ನಾವು ಮರೆಮಾಡಲು ಏನೂ ಇಲ್ಲದೆ ಒಟ್ಟಿಗೆ ನಿಲ್ಲುತ್ತೇವೆ. ದಯೆ, ಬೆಂಬಲ ಮತ್ತು ತಿಳುವಳಿಕೆಯನ್ನು ತೋರಿಸಿದ ಎಲ್ಲರಿಗೂ ಧನ್ಯವಾದಗಳು' ಎಂದು ರಶೀದ್ ಖಾನ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ವರ್ಷದ ಹಿಂದಷ್ಟೇ ಮೊದಲ ವಿವಾಹ
ಅಂದಹಾಗೆ ರಶೀದ್ ಅವರ ಮೊದಲ ವಿವಾಹವು ಒಂದು ವರ್ಷದ ಹಿಂದಷ್ಟೇ ಅಂದರೆ ಅಕ್ಟೋಬರ್ 2024 ರಲ್ಲಿ ಕಾಬೂಲ್‌ನಲ್ಲಿ ನಡೆದಿತ್ತು. ಅವರ ಸಹೋದರರಾದ ಆಮಿರ್ ಖಲೀಲ್, ಜಕಿವುಲ್ಲಾ ಮತ್ತು ರಜಾ ಖಾನ್ ಕೂಡ ಅದೇ ರಾತ್ರಿ ವಿವಾಹವಾಗಿದ್ದರು. 26 ವರ್ಷದ ರಶೀದ್ 2024 ರ ಅಕ್ಟೋಬರ್‌ನಲ್ಲಿ ತನ್ನ ತಾಯಿಯ ಸೋದರ ಸಂಬಂಧಿಯೊಂದಿಗೆ ತನ್ನ ಮೊದಲ ಮದುವೆಯನ್ನು ಘೋಷಿಸಿದ್ದರು.
Advertisement