

ಪರ್ತ್: ತೀವ್ರ ಕುತೂಹಲ ಕೆರಳಿಸಿದ್ದ ಆಸ್ಚ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಕೇವಲ ಎರಡೇ ದಿನಕ್ಕೆ ಅಂತ್ಯವಾಗಿದ್ದು, ಕಾಂಗರೂಗಳು ಭರ್ಜರಿ ಜಯ ಸಾಧಿಸಿದ್ದಾರೆ.
ಹೌದು.. ಪರ್ತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಅಂತ್ಯವಾದ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಇಂಗ್ಲೆಂಡ್ ನೀಡಿದ್ದ 205 ರನ್ಗಳ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ಅಕ್ಷರಶಃ ಆಕ್ರಮಣಕಾರಿ ಆಟದ ಮೊರೆ ಹೋಯಿತು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಹೆಡ್ ಕೇವಲ 69 ಎಸೆತಗಳಲ್ಲಿ ಶತಕ ಪೂರೈಸಿದರು.
ಅಲ್ಲದೆ 83 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ 123 ರನ್ ಬಾರಿಸಿದರು. ಟ್ರಾವಿಸ್ ಹೆಡ್ ಅವರ ಈ ಸ್ಫೋಟಕ ಸೆಂಚುರಿ ನೆರವಿನೊಂದಿಗೆ ಆಸ್ಟ್ರೇಲಿಯಾ ತಂಡವು 28.2 ಓವರ್ಗಳಲ್ಲಿ 205 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
104 ವರ್ಷಗಳ ಬಳಿಕ 2 ದಿನಕ್ಕೇ ಅಂತ್ಯವಾದ ಟೆಸ್ಟ್ ಪಂದ್ಯ
ಇನ್ನು ಬರೋಬ್ಬರಿ 104 ವರ್ಷಗಳ ಬಳಿಕ ಆ್ಯಶಸ್ ಸರಣಿಯ ಪಂದ್ಯವೊಂದು ಕೇವಲ 2 ದಿನಗಳಲ್ಲಿ ಮುಗಿದಿದೆ. ಅಂದರೆ ಕೊನೆಯ ಬಾರಿ ಉಭಯ ತಂಡಗಳ ಮುಖಾಮುಖಿ 2 ದಿನಗಳಲ್ಲಿ ಅಂತ್ಯಗೊಂಡಿದ್ದು 1921 ರಲ್ಲಿ.
ನಾಟಿಂಗ್ಹ್ಯಾಮ್ನ ಟ್ರೆಂಟ್ ಬಿಡ್ಜ್ ಮೈದಾನದಲ್ಲಿ ನಡೆದ ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪ್ರಥಮ ಇನಿಂಗ್ಸ್ನಲ್ಲಿ 112 ರನ್ಗಳಿಗೆ ಆಲೌಟ್ ಆಗಿತ್ತು. ಆ ಬಳಿಕ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ 232 ರನ್ಗಳ ಕಲೆಹಾಕಿತ್ತು.
ದ್ವಿತೀಯ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ಕೇವಲ 147 ರನ್ಗಳಿಗೆ ಆಲೌಟ್ ಆಗಿತ್ತು. ಅದರಂತೆ ಕೊನೆಯ ಇನಿಂಗ್ಸ್ನಲ್ಲಿ 30 ರನ್ಗಳ ಗುರಿ ಪಡೆದ ಆಸ್ಟ್ರೇಲಿಯಾ 2ನೇ ದಿನದಾಟದಲ್ಲೇ ಪಂದ್ಯ ಮುಗಿಸಿ 10 ವಿಕೆಟ್ಗಳ ಜಯ ಸಾಧಿಸಿತ್ತು.
ಇದೀಗ ಬರೋಬ್ಬರಿ 104 ವರ್ಷಗಳ ಬಳಿಕ ಆಸ್ಟ್ರೇಲಿಯಾ ಪರ ಮತ್ತೊಮ್ಮೆ ಆ್ಯಶಸ್ ಸರಣಿಯ ಪಂದ್ಯವನ್ನು ಎರಡನೇ ದಿನದಲ್ಲಿ ಮುಗಿಸಿ ಅತ್ಯಪರೂಪದ ದಾಖಲೆ ನಿರ್ಮಿಸಿದ್ದಾರೆ.
Advertisement