

ಟೀಂ ಇಂಡಿಯಾದ ಬ್ಯಾಟರ್ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹ ಇದೀಗ ಅರ್ಧಕ್ಕೆ ಮೊಟಕುಗೊಂಡಿದೆ. ಸ್ಮೃತಿ ಅವರ ತಂದೆಯ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾದ ನಂತರ ಮದುವೆಯನ್ನು ಮುಂದೂಡಲಾಗಿದೆ. ವೈರಲ್ ಸೋಂಕು ಮತ್ತು ಹೆಚ್ಚಿದ ಅಸಿಡಿಟಿಯಿಂದಾಗಿ ಪಲಾಶ್ ಮುಚ್ಚಲ್ ಅವರನ್ನು ಸಾಂಗ್ಲಿಯ (ಮಹಾರಾಷ್ಟ್ರ) ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಸೋಮವಾರ ವರದಿಯಾಗಿತ್ತು. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ, ಅವರನ್ನು ಮುಂಬೈನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.
ಎನ್‌ಡಿಟಿವಿ ಮೂಲಗಳ ಪ್ರಕಾರ, ಪಲಾಶ್ ಅವರನ್ನು ಮುಂಬೈನ ಗೋರೆಗಾಂವ್‌ನಲ್ಲಿರುವ ಎಸ್‌ವಿಆರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಂಗೀತ ಕಚೇರಿಗಳು ಮತ್ತು ಮದುವೆಗಾಗಿ ನಿರಂತರ ಪ್ರಯಾಣವು ಅವರನ್ನು ತೀವ್ರ ಒತ್ತಡಕ್ಕೆ ಒಳಪಡಿಸಿತು, ಇದು ಅಂತಿಮವಾಗಿ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಪಲಾಶ್ ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯ ತೀವ್ರತೆ ಇನ್ನೂ ತಿಳಿದುಬಂದಿಲ್ಲ.
ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರು ಅನಾರೋಗ್ಯಕ್ಕೆ ಒಳಗಾದ ನಂತರ ವಿವಾಹ ಸಮಾರಂಭವನ್ನು ಮುಂದೂಡಲು ಪಲಾಶ್ ಅವರೇ ನಿರ್ಧರಿಸಿದರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಪಲಾಶ್ ಅವರ ತಾಯಿ ಅಮಿತಾ, ಸ್ಮೃತಿ ಅವರ ತಂದೆ ಶ್ರೀನಿವಾಸ ಮಂಧಾನ ಅವರನ್ನು ಪಲಾಶ್ ತುಂಬಾ ಇಷ್ಟಪಡುತ್ತಾನೆ. ಹೀಗಾಗಿ, ಅವರ ಅನಾರೋಗ್ಯದ ಸುದ್ದಿ ಆತನನ್ನು ಆಘಾತಕ್ಕೀಡುಮಾಡಿತು ಮತ್ತು ಅವರು ವಿವಾಹವನ್ನು ಸ್ಥಗಿತಗೊಳಿಸಲು ನಿರ್ಧರಿಸಿದರು ಎಂದು ಪತ್ರಿಕೆಗೆ ತಿಳಿಸಿದ್ದಾರೆ.
'ಪಲಾಶ್ ಸ್ಮೃತಿಯ ತಂದೆಯೊಂದಿಗೆ ತುಂಬಾ ಬಾಂಧವ್ಯ ಹೊಂದಿದ್ದಾರೆ... ಸ್ಮೃತಿಗಿಂತಲೂ ಅವರು ಅವರೊಂದಿಗೆ ಹೆಚ್ಚು ಆತ್ಮೀಯ ಒಡನಾಟ ಹೊಂದಿದ್ದಾರೆ. ಅವರು ಅನಾರೋಗ್ಯಕ್ಕೆ ಒಳಗಾದ ಕೂಡಲೇ ಸ್ಮೃತಿಗಿಂತ ಮೊದಲೇ ಅವರು ಗುಣಮುಖರಾಗುವವರೆಗೂ ಮದುವೆಯ ಆಚರಣೆಗಳನ್ನು ಮುಂದುವರಿಸಬಾರದು ಎಂದು ಪಲಾಶ್ ನಿರ್ಧರಿದರು' ಎಂದು ಅವರು ಹೇಳಿದರು.
'ಶ್ರೀನಿವಾಸ್ ಅವರ ಹೃದಯ ಸಮಸ್ಯೆಯ ಸುದ್ದಿ ತನ್ನ ಮಗನ ಮೇಲೆ ತೀವ್ರ ಪರಿಣಾಮ ಉಂಟುಮಾಡಿತು. ಆತ ಕೂಡ ಅಳುವುದನ್ನು ತಡೆಯಲಾಗಲಿಲ್ಲ' ಎಂದು ಪಲಾಶ್ ಅವರ ತಾಯಿ ಹೇಳಿದ್ದಾರೆ.
'ಹಳದಿ ಶಾಸ್ತ್ರ ಮುಗಿದ ನಂತರ, ನಾವು ಅವನನ್ನು ಹೊರಗೆ ಹೋಗಲು ಬಿಡಲಿಲ್ಲ. ಅವನು ತುಂಬಾ ಅಳುತ್ತಿದ್ದನು, ಅವನ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿತು. ಬಳಿಕ ಆತನನ್ನು ನಾಲ್ಕು ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಇಡಲಾಯಿತು. ಅವನಿಗೆ IV ಡ್ರಿಪ್ ನೀಡಲಾಯಿತು, ECG ಮಾಡಲಾಯಿತು ಮತ್ತು ಇತರ ಪರೀಕ್ಷೆಗಳನ್ನು ಮಾಡಲಾಯಿತು. ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿತು. ಆದರೆ, ಅವನು ತುಂಬಾ ಒತ್ತಡದಲ್ಲಿದ್ದಾನೆ' ಎಂದಿದ್ದಾರೆ.
Advertisement