

ಗುವಾಹತಿ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಭಾರತ ಹೀನಾಯ ಸೋಲು ಕಂಡಿದ್ದು ಆ ಮೂಲಕ 2-0 ಅಂತರದಲ್ಲಿ ಟೆಸ್ಟ್ ಸರಣಿ ಕೈ ಚೆಲ್ಲಿದೆ.
ಗುವಾಹತಿಯ ಬರ್ಸಾಪಾರಾ ಕ್ರೀಡಾಂಗಣದಲ್ಲಿ ಇಂದು ಮುಕ್ತಾಯವಾದ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನೀಡಿದ್ದ 548 ರನ್ ಗಳ ಗುರಿ ಬೆನ್ನು ಹತ್ತಿದ ಭಾರತ ತಂಡ ಕೇವಲ 140 ರನ್ ಗಳಿಗೇ ಆಲೌಟ್ ಆಗುವ ಮೂಲಕ ಬರೊಬ್ಬರಿ 408 ರನ್ ಗಳ ಅಂತರದ ಹೀನಾಯ ಸೋಲು ಕಂಡಿದೆ.
2ನೇ ಇನ್ನಿಂಗ್ಸ್ ನ ಯಾವುದೇ ಹಂತದಲ್ಲೂ ಆಫ್ರಿಕಾಗೆ ಸವಾಲನ್ನೇ ಒಡ್ಡದ ಟೀಂ ಇಂಡಿಯಾ ಅಂತಿಮವಾಗಿ 140ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ 2ನೇ ಇನ್ನಿಂಗ್ಸ್ ನಲ್ಲಿ ರವೀಂದ್ರ ಜಡೇಜಾ ಗಳಿಸಿದ 54 ರನ್ ಗಳೇ ತಂಡದ ಪರ ಆಟಗಾರನೋರ್ವ ಗಳಿಸಿದ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿತ್ತು.
ಉಳಿದಂತೆ ಜೈಸ್ವಾಲ್ 13, ಸಾಯಿ ಸುದರ್ಶನ್ 14, ನಾಯಕ ರಿಷಬ್ ಪಂತ್ 13, ವಾಷಿಂಗ್ಟನ್ ಸುಂದರ್ 16, ಗಳಿಸಿದ್ದು ಬಿಟ್ಟರೆ ಉಳಿದಾವ ಬ್ಯಾಟರ್ ಗಳ ಸ್ಕೋರ್ ಎರಡಂಕಿ ಮೊತ್ತ ದಾಟಲಿಲ್ಲ. ಅದರಲ್ಲೂ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಮತ್ತು ಸಿರಾಜ್ ಶೂನ್ಯಕ್ಕೆ ಔಟಾದರು.
ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಹೀನಾಯ ಪರಾಜಯ, 2 ದಶಕಗಳ ಬಳಿಕ ಕ್ಲೀನ್ ಸ್ವೀಪ್
ಅಂತೆಯೇ ಈ ಮೂಲಕ ಬರೋಬ್ಬರಿ 26 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಆಫ್ರಿಕಾ ಪಡೆ ಯಶಸ್ವಿಯಾಗಿದೆ. ಇದಕ್ಕೂ ಮುನ್ನ ಭಾರತದಲ್ಲಿ ಸೌತ್ ಆಫ್ರಿಕಾ ಟೆಸ್ಟ್ ಸರಣಿ ಗೆದ್ದಿದ್ದು 1999 ರಲ್ಲಿ. ಇದಾದ ಬಳಿಕ ತವರಿನಲ್ಲಿ ಟೀಮ್ ಇಂಡಿಯಾವನ್ನು ಬಗ್ಗು ಬಡಿಯಲು ಸಾಧ್ಯವಾಗಿರಲಿಲ್ಲ.
ಇದೀಗ ಎರಡು ದಶಕಗಳ ಬಳಿಕ ಭಾರತ ತಂಡವನ್ನು ಹೀನಾಯವಾಗಿ ಸೋಲಿಸಿ ಟೆಂಬಾ ಬವುಮಾ ಪಡೆ ಹೊಸ ಇತಿಹಾಸ ನಿರ್ಮಿಸಿದೆ. ಕೊಲ್ಕತ್ತಾದಲ್ಲಿ ನಡೆದ ಈ ಸರಣಿಯ ಮೊದಲ ಮ್ಯಾಚ್ನಲ್ಲಿ ಸೌತ್ ಆಫ್ರಿಕಾ ತಂಡ 30 ರನ್ಗಳ ಜಯ ಸಾಧಿಸಿತ್ತು. ಇದೀಗ ಗುವಾಹಟಿಯಲ್ಲೂ ಭಾರತ ತಂಡವನ್ನು ಬಗ್ಗು ಬಡಿಯುವಲ್ಲಿ ಯಶಸ್ವಿಯಾಗಿದೆ.
ಹೇಗಿತ್ತು ಪಂದ್ಯ?
ಈ ಫಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡವು ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 489 ರನ್ ಕಲೆಹಾಕಿದ್ದರು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಟೀಮ್ ಇಂಡಿಯಾ ಕಲೆಹಾಕಿದ್ದು ಕೇವಲ 201 ರನ್ಗಳು ಮಾತ್ರ.
ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ 288 ರನ್ಗಳ ಹಿನ್ನಡೆ ಅನುಭವಿಸಿತು. 288 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ತಂಡವು 5 ವಿಕೆಟ್ ನಷ್ಟಕ್ಕೆ 260 ರನ್ಗಳಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ಭಾರತ ತಂಡಕ್ಕೆ ಕೊನೆಯ ಇನಿಂಗ್ಸ್ನಲ್ಲಿ 549 ರನ್ಗಳ ಕಠಿಣ ಗುರಿ ನೀಡಿದ್ದರು.
2ನೇ ಇನ್ನಿಂಗ್ಸ್ ನಲ್ಲೂ ಭಾರತ ಕಳಪೆ ಬ್ಯಾಟಿಂಗ್
ಈ ಕಠಿಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯದ ವೇಳೆ ಕೆಎಲ್ ರಾಹುಲ್ (6) ಹಾಗೂ ಯಶಸ್ವಿ ಜೈಸ್ವಾಲ್ (13) ಅವರ ವಿಕೆಟ್ ಕಳೆದುಕೊಂಡಿತು. ಇನ್ನು ಐದನೇ ದಿನದಾಟದ ಆರಂಭದಲ್ಲೇ ಕುಲ್ದೀಪ್ ಯಾದವ್ (5) ಔಟಾಗಿದ್ದಾರೆ. ಇದರ ಬೆನ್ನಲ್ಲೇ ಧ್ರುವ್ ಜುರೆಲ್ (2) ಕೂಡ ವಿಕೆಟ್ ಒಪ್ಪಿಸಿದ್ದಾರೆ.
ಈ ಹಂತದಲ್ಲಿ ಕಣಕ್ಕಿಳಿದ ನಾಯಕ ರಿಷಭ್ ಪಂತ್ 13 ರನ್ ಬಾರಿಸಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ರವೀಂದ್ರ ಜಡೇಜಾ 54 ರನ್ ಬಾರಿಸಿದರು. ಆದರೆ ಅಂತಿಮವಾಗಿ 140 ರನ್ಗಳಿಗೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾ 408 ರನ್ಗಳಿಂದ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡ 26 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದುಕೊಂಡಿದೆ.
ಆ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ.
Advertisement