

ಗುವಾಹತಿ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 408 ರನ್ ಗಳ ಅಂತರದಲ್ಲಿ ಸೋಲು ಕಾಣುವ ಮೂಲಕ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಅಂಕಪಟ್ಟಿಯಲ್ಲೂ ಕೆಳಕ್ಕೆ ಕುಸಿದಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಮುಕ್ತಾಯದ ಬೆನ್ನಲ್ಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ನೂತನ ಪಾಯಿಂಟ್ಸ್ ಟೇಬಲ್ ಬಿಡುಗಡೆಯಾಗಿದ್ದು, ಹೊಸ ಅಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಟಾಪ್-5 ನಲ್ಲಿ ಕಾಣಿಸಿಕೊಂಡಿದ್ದರೂ,ತನ್ನ ಸ್ಥಾನದಲ್ಲಿ ಕುಸಿತ ಕಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲು ಭಾರತ ತಂಡದ ಶೇಕಡಾವಾರು ಅಂಕಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ನೂತನ ಅಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡವು ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದು, ಆಸ್ಟ್ರೇಲಿಯಾ ಪಡೆ ಈವರೆಗೆ ಆಡಿರುವ 4 ಟೆಸ್ಟ್ ಪಂದ್ಯಗಳಲ್ಲೂ ಜಯ ಸಾಧಿಸಿದೆ. ಈ ಮೂಲಕ 100 ಶೇಕಡಾವಾರಿನೊಂದಿಗೆ ಮೊದಲ ಸ್ಥಾನವನ್ನು ಅಲಂಕರಿಸಿದೆ.
ಭಾರತ ತಂಡವನ್ನು ತವರಿನಲ್ಲೇ 2-0 ಅಂತರದಲ್ಲಿ ವೈಟ್ ವಾಶ್ ಮಾಡಿದ ದಕ್ಷಿಣ ಆಫ್ರಿಕಾ 75 ಶೇಕಡಾವಾರಿನೊಂದಿಗೆ ದ್ವಿತೀಯ ಸ್ಥಾನಕ್ಕೇರಿದೆ. ಟೆಂಬಾ ಬವುಮಾ ಪಡೆ ಈವರೆಗೆ 4 ಟೆಸ್ಟ್ ಪಂದ್ಯಗಳನ್ನಾಡಿದ್ದು, ಈ ನಾಲ್ಕು ಮ್ಯಾಚ್ಗಳಲ್ಲಿ 3 ಜಯ ಸಾಧಿಸಿದೆ. ತೃತೀಯ ಸ್ಥಾನದಲ್ಲಿ ಶ್ರೀಲಂಕಾ ತಂಡವಿದ್ದು, ಲಂಕಾ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಆಡಿದ 2 ಮ್ಯಾಚ್ಗಳಲ್ಲಿ ಒಂದು ಗೆಲುವು ಹಾಗೂ ಒಂದು ಡ್ರಾನೊಂದಿಗೆ 66.67 ಶೇಕಡಾವಾರು ಹೊಂದಿದೆ. ಈ ಮೂಲಕ WTC ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
4ನೇ ಸ್ಥಾನದಲ್ಲಿ ಪಾಕಿಸ್ತಾನ ಭಡ್ತಿ ಪಡೆದಿದ್ದು, ಪಾಕ್ ಪಡೆ ಆಡಿರುವ 2 ಮ್ಯಾಚ್ಗಳಲ್ಲಿ ಒಂದು ಜಯ ಹಾಗೂ ಒಂದು ಸೋಲಿನೊಂದಿಗೆ 50 ಶೇಕಡಾವಾರು ಪಡೆದುಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ಅಂತೆಯೇ ನಾಲ್ಕನೇ ಸ್ಥಾನದಲ್ಲಿದ್ದ ಭಾರತ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಮುಖಭಂಗದ ಬಳಿಕ 5ನೇ ಸ್ಥಾನಕ್ಕೆ ಕುಸಿದಿದೆ. ಭಾರತ ಈವರೆಗೆ 9 ಪಂದ್ಯಗಳಲ್ಲಿ 4 ಗೆಲುವು ಮತ್ತು ಒಂದು ಡ್ರಾ ಸಾಧಿಸಿದೆ. 4 ಮ್ಯಾಚ್ಗಳಲ್ಲೂ ಹೀನಾಯ ಸೋಲನುಭವಿಸಿದೆ. ಈ ಸೋಲು - ಗೆಲುವುಗಳೊಂದಿಗೆ 48.150 ಶೇಕಡಾವಾರು ಅಂಕಗಳನ್ನು ಹೊಂದಿದೆ.
ಇಂಗ್ಲೆಂಡ್ ತಂಡವು 36.110 ಶೇಕಡಾವಾರು ಅಂಕಗಳೊಂದಿಗೆ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಬಾಂಗ್ಲಾದೇಶ ತಂಡವು 16.67 ಶೇಕಡಾವಾರು ಅಂಕಗಳನ್ನು ಪಡೆದುಕೊಂಡಿದೆ. ಅತ್ತ ವೆಸ್ಟ್ ಇಂಡೀಸ್ ತಂಡವು 5 ಸೋಲುಗಳೊಂದಿಗೆ ಅಂಕ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದರೆ, ನ್ಯೂಜಿಲೆಂಡ್ ಇನ್ನೂ ಸಹ WTC ಅಂಕಪಟ್ಟಿಯಲ್ಲಿ ಖಾತೆ ತೆರೆದಿಲ್ಲ.
Advertisement