
ಇಸ್ಲಾಮಾಬಾದ್: ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಫೈನಲ್ ಪಂದ್ಯದ ಬಳಿಕ ಭಾರತಕ್ಕೆ ನೀಡಬೇಕಿದ್ದ ಟ್ರೋಫಿ ಕದ್ದೊಯ್ದಿದ್ದ ಪಿಸಿಬಿ ಅಧ್ಯಕ್ಷ Mohsin Naqvi ವಿವಾದ ನಡುವೆಯೇ ಪಾಕಿಸ್ತಾನದ ಮತ್ತೊಂದು ಕರ್ಮಕಾಂಡ ಬಟಾಬಯಲಾಗಿದೆ.
ಅದ್ಯಾಕೋ ವಿವಾದಗಳಿಗೂ ಪಾಕಿಸ್ತಾನಕ್ಕೂ ಬಿಡದ ನಂಟು.. ಪಾಕಿಸ್ತಾನ ಕೇವಲ ತನ್ನ ವಿದೇಶಿ ಕ್ರಿಕೆಟಿಗರೊಂದಿಗೆ ಮಾತ್ರವಲ್ಲ.. ತನ್ನದೇ ದೇಶದ ಕ್ರಿಕೆಟಿಗರೊಂದಿಗೂ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದೆ.
ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಯೀದ್ ಅಜ್ಮಲ್ ತಮ್ಮ ಪ್ರಧಾನಿ ವಿರುದ್ಧವೇ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.
ಹೌದು... ಸಂದರ್ಶನವೊಂದರಲ್ಲಿ ಮಾತಾನಾಡಿದ್ದ ಸಯೀದ್ ಅಜ್ಮಲ್, ಪಾಕಿಸ್ತಾನದ ಪ್ರಧಾನಿ ತಮಗೆ ನೀಡಿದ್ದ 25 ಲಕ್ಷ ರೂ ಗಳ ಚೆಕ್ ಬೌನ್ಸ್ ಆಗಿದ್ದ ಕಥೆಯನ್ನು ಹಂಚಿಕೊಂಡಿದ್ದಾರೆ.
ಇಷ್ಟಕ್ಕೂ ಆಗಿದ್ದೇನು?
ಸಯೀಜ್ ಅಜ್ಮಲ್ ಹೇಳಿರುವಂತೆ, 2009ರಲ್ಲಿ ನಡೆದ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಪಾಕಿಸ್ತಾನ ಗೆದ್ದ ನಂತರ, ಅಂದಿನ ಪಾಕಿಸ್ತಾನ ಪ್ರಧಾನಮಂತ್ರಿ ಯೂಸುಫ್ ರಝಾ ಗಿಲಾನಿ ಅವರು ಪ್ರತಿ ಆಟಗಾರನಿಗೆ 25 ಲಕ್ಷ ರೂಪಾಯಿಗಳ ಚೆಕ್ ನೀಡಿದ್ದರು. ಆದರೆ ಅದು ಬೌನ್ಸ್ ಆಗಿತ್ತು. ಅದು ನಗದಾಗಲಿಲ್ಲ ಎಂದು ಹೇಳಿದ್ದಾರೆ.
'ಪ್ರಧಾನಮಂತ್ರಿಯವರು ನಮಗೆ ದೂರವಾಣಿ ಮಾಡಿ ತಲಾ 25 ಲಕ್ಷ ರೂಪಾಯಿಗಳ ಚೆಕ್‌ಗಳನ್ನು ಕಳುಹಿಸುತ್ತಿರುವುದಾಗಿ ಹೇಳಿದ್ದರು.
ನಾವು ಬಹಳ ಸಂತೋಷಪಟ್ಟಿದ್ದೆವು. ಏಕೆಂದರೆ ಸಿಕ್ಕ ಹಣವು ದೊಡ್ಡ ಮೊತ್ತದ್ದಾಗಿತ್ತು. ಆದರೆ ಆ ಚೆಕ್‌ಗಳು ನಗದಾಗಲಿಲ್ಲ. ಅದು ಬೌನ್ಸ್ ಆಗಿತ್ತು. ಈ ಬಗ್ಗೆ ನಾವು ವಿಚಾರಿಸಿದಾಗ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರು ನಿಮಗೆ ಚೆಕ್ ನೀಡುತ್ತಾರೆ ಎಂದು ಹೇಳಲಾಯಿತು.
ಬಳಿಕ ಮಂಡಳಿಯ ಅಧ್ಯಕ್ಷರು ಈ ಬಗ್ಗೆ ಸ್ಪಷ್ಟವಾಗಿ ನಿರಾಕರಿಸಿದರು. ಅಲ್ಲದೆ ಅಷ್ಟು ಮೊತ್ತದ ಹಣವನ್ನು ಎಲ್ಲಿಂದ ತರಬೇಕು ಎಂದು ಹೇಳಿದರು. ಈ ಪ್ರಹಸನ ನಮಗೆ ಕೊಂಚ ಆಘಾತ ತಂದಿತು ಎಂದು ಸಯೀದ್ ಅಜ್ಮಲ್ ಹೇಳಿದರು.
ಅಂತೆಯೇ ಅಂದು ನಮಗೆ ಸಿಕ್ಕ ಹಣ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಬಂದದ್ದು ಮಾತ್ರವಾಗಿತ್ತು. ಮಂಡಳಿಯಾಗಲಿ ಅಥವಾ ಪಾಕ್ ಸರ್ಕಾರವಾಗಲಿ ನಮಗೆ ಹಣ ನೀಡಿರಲಿಲ್ಲ ಎಂದು ಹೇಳಿದರು. ಈ ಬೆಳವಣಿಗೆ ಬೆನ್ನಲ್ಲೇ ನಡೆದ ಶ್ರೀಲಂಕಾ ಪ್ರವಾಸದಲ್ಲಿ ಪಾಕಿಸ್ತಾನ ತಂಡವು ಹೀನಾಯ ಸೋಲು ಕಂಡಿತು ಎಂದು ಸಯೀದ್ ಅಜ್ಮಲ್ ಹೇಳಿದ್ದಾರೆ.
Advertisement