
ಅಹ್ಮದಾಬಾದ್: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಸುದೀರ್ಘ ಶತಕದ ಬರ ಎದುರಿಸುತ್ತಿದ್ದ ಕನ್ನಡಿಗ ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸುವ ಮೂಲಕ ಕೊನೆಗೂ ತಮ್ಮ 9 ವರ್ಷಗಳ ಬರ ನೀಗಿಸಿಕೊಂಡಿದ್ದಾರೆ.
ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ. ಆರಂಭಿಕ ಆಟಗಾರ ಕೆಎಲ್ ರಾಹುಲ್ ಶತಕ ಸಿಡಿಸಿದ್ದು ಆ ಮೂಲಕ ಭಾರತದ ಮೇಲುಗೈನಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ.
ಕನ್ನಡಿಗ ಕೆ.ಎಲ್ ರಾಹುಲ್ ಅಮೋಘ ಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ವಿಂಡೀಸ್ ಬೌಲರ್ ಗಳ ಮೇಲೆ ಕೆಎಲ್ ರಾಹುಲ್ ಸವಾರಿ
ಇಂದಿನ ತಮ್ಮ ಇನ್ನಿಂಗ್ಸ್ ನಲ್ಲಿ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿದರು. 197 ಎಸೆತಗಳನ್ನು ಎದುರಿಸಿದ ರಾಹುಲ್, 12 ಬೌಂಡರಿಗಳ ಸಹಿತ 100 ರನ್ ಗಳಿಸಿ ಜೋಮೆಲ್ ವಾರಿಕನ್ ಅವರಿಗೆ ವಿಕೆಟ್ ಒಪ್ಪಿಸಿದರು.
ಬರೊಬ್ಬರಿ 9 ವರ್ಷಗಳ ಬಳಿಕ ತವರಿನಲ್ಲಿ ಶತಕ
ಮೊದಲ ದಿನದಾಟದ ಅಂತ್ಯಕ್ಕೆ ಅರ್ಧಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದ ಅವರು ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲೇ ಶತಕ ಸಿಡಿಸಿದರು. 2ನೇ ದಿನದಾಟದ ಮೊದಲ ಇನಿಂಗ್ಸ್‌ನಲ್ಲಿ ರೋಸ್ಟನ್ ಚೇಸ್ ಬೌಲಿಂಗ್ ವೇಳೆ ಸಿಂಗಲ್ ತೆಗೆದುಕೊಳ್ಳುವ ಮೂಲಕ ಶತಕ ಸಿಡಿಸಿದರು. ಇದು ಅವರ ವೃತ್ತಿ ಜೀವನದಲ್ಲಿ ಭಾರತದಲ್ಲಿ ದಾಖಲಾದ 2ನೇ ಶತಕವಾಗಿದೆ.
ಆ ಮೂಲಕ ಟೆಸ್ಟ್ ವೃತ್ತಿ ಜೀವನದಲ್ಲಿ 11ನೇ ಶತಕ ಸಿಡಿಸಿದ ಸಾಧನೆ ಮಾಡಿದರು. ರಾಹುಲ್ ಬರೋಬ್ಬರಿ 9 ವರ್ಷಗಳ ಬಳಿಕ ತವರಿನಲ್ಲಿ ಶತಕದ ಬರ ನೀಗಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ 2016ರಲ್ಲಿ ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ 199 ರನ್‌ಗಳಿಸಿದ್ದು ತವರಿನಲ್ಲಿ ಅವರ ಕೊನೆಯ ಶತಕವಾಗಿತ್ತು. ಕೆ.ಎಲ್ ರಾಹುಲ್ 2016 ರಿಂದ 2025 ರ ಅವಧಿಯಲ್ಲಿ ಅಂದರೆ ಬರೋಬ್ಬರಿ 3,211 ದಿನಗಳ ನಂತರ ತವರಿನಲ್ಲಿ ಶತಕದ ಬರ ನೀಗಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಟೀಂ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ತವರಿನ ಅಂಗಳದಲ್ಲಿ 2013ರಲ್ಲಿ ಶತಕ ಗಳಿಸಿದ್ದರು. ಅದಾದ ಬಳಿಕ 2021 ರಲ್ಲಿ ಅಂದರೆ 2,655 ದಿನಗಳ ಬಳಿಕ ಶತಕ ಸಿಡಿಸಿದ್ದರು.
Advertisement