
ಕೊಲಂಬೋ: ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯ ಭಾರತ vs ಪಾಕಿಸ್ತಾನ ಪಂದ್ಯದಲ್ಲಿ ತಮ್ಮನ್ನು ಕೆಣಕಿದ ಪಾಕ್ ಸ್ಪಿನ್ನರ್ ಗೆ ಭಾರತದ ನಾಯಕ ಹರ್ಮನ್ ಪ್ರೀತ್ ಕೌರ್ ಕೆಂಡ ಕಾರಿರುವ ವಿಡಿಯೋ ವೈರಲ್ ಆಗುತ್ತಿದೆ.
ನಿನ್ನೆ ಶ್ರೀಲಂಕಾದ ಕೊಲಂಬೋದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ವನಿತೆಯರ ತಂಡ 88 ರನ್ ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಐಸಿಸಿ ಟೂರ್ನಿಯಲ್ಲಿ ಭಾರತದ ಎದುರು ಮತ್ತೆ ಪಾಕಿಸ್ತಾನ ಮುಖಭಂಗ ಅನುಭವಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗಧಿತ 50 ಓವರ್ ಗಳಲ್ಲಿ 247 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ 43 ಓವರ್ ನಲ್ಲಿ 159 ರನ್ ಗೆ ಆಲೌಟ್ ಆಯಿತು. ಆ ಮೂಲಕ ಭಾರತ 88 ರನ್ ಗಳ ಜಯ ಸಾಧಿಸಿತು.
ಭಾರತ ನಾಯಕಿ ಕೆಣಕಿದ ಪಾಕ್ ಸ್ಪಿನ್ನರ್
ಇನ್ನು ಭಾರತ ಬ್ಯಾಟಿಂಗ್ ವೇಳೆ ಪಾಕಿಸ್ತಾನ ತಂಡದ ಸ್ಪಿನ್ನರ್ ನಶ್ರಾ ಸಂಧು ಭಾರತ ತಂಡ ನಾಯಕ ಹರ್ಮನ್ ಪ್ರೀತ್ ಕೌರ್ ನ್ನು ಕೆಣಕಿದ ಘಟನೆ ನಡೆಯಿತು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆಗಮಿಸಿದ ಹರ್ಮನ್ ಪ್ರೀತ್ ಕೌರ್ 34 ಎಸೆತಗಳಲ್ಲಿ 2 ಬೌಂಡರಿ ಸಹಿತ 19 ರನ್ ಗಳಿಸಿದ್ದರು. ಅಂತೆಯೇ ಹರ್ಲೀನ್ ಡಿಯೋಲ್ ಜೊತೆ 39 ರನ್ ಗಳ ಉತ್ತಮ ಜೊತೆಯಾಟ ಕೂಡ ಆಡಿದರು.
ಭಾರತದ ಇನ್ನಿಂಗ್ಸ್ ನ 22ನೇ ಓವರ್ ನಲ್ಲಿ ಸ್ಪಿನ್ನರ್ ನಶ್ರಾ ಸಂಧು ಎಸೆದ ಎಸೆತವನ್ನು ಹರ್ಮನ್ ಪ್ರೀತ್ ಕೌರ್ ರಕ್ಷಣಾತ್ಮಕವಾಗಿ ಆಡಿದರು. ಈ ವೇಳೆ ಚೆಂಡು ನೇರವಾಗಿ ಸಂದು ಕೈ ಸೇರಿತು. ಆಗ ಸಂಧು ಚೆಂಡನ್ನು ಕೋಪದಿಂದ ಹರ್ಮನ್ ಪ್ರೀತ್ ಕೌರ್ ಕಡೆ ಎಸೆಯುವಂತೆ ಆ್ಯಕ್ಷನ್ ಮಾಡಿದರು. ಅಲ್ಲದೆ ದೊಡ್ಡದಾಗಿ ಕಣ್ಣು ಬಿಡ್ಡುತಾ ಹರ್ಮನ್ ಪ್ರೀತ್ ಕೌರ್ ರನ್ನು ಗುರಾಯಿಸಿದರು.
ಸ್ಥಳದಲ್ಲೇ ತಿರುಗೇಟು ಕೊಟ್ಟ ಹರ್ಮನ್ ಪ್ರೀತ್ ಕೌರ್
ಇನ್ನು ನಶ್ರಾ ಸಂಧು ನಡೆಗೆ ಸ್ಥಳದಲ್ಲೇ ತಿರುಗೇಟು ಕೊಟ್ಟ ಹರ್ಮನ್ ಪ್ರೀತ್ ಕೌರ್, "Bh***diki ಕಣ್ಣು ತೋರಿಸ್ತಾಳೆ' ಎಂದು ಕಿಡಿಕಾರಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ನೋ ಹ್ಯಾಂಡ್ ಶೇಕ್ ಪಾಲಿಸಿ ಮುಂದುವರಿಕೆ
ಈ ಹಿಂದೆ ಆಪರೇಷನ್ ಸಿಂದೂರ್ ನಿಮಿತ್ತ ಭಾರತೀಯ ಸೇನೆಗೆ ಗೌರವ ನೀಡುವ ಸಲುವಾಗಿ ಭಾರತ ಪುರುಷರ ಕ್ರಿಕೆಟ್ ತಂಡ ಪಾಕ್ ಆಟಗಾರರೊಂದಿಗೆ ಹ್ಯಾಂಡ್ ಶೇಕ್ ಮಾಡಿರಲಿಲ್ಲ. ಇದೀಗ ಅದೇ ನೀತಿಯನ್ನು ಭಾರತ ಮಹಿಳಾ ತಂಡ ಕೂಡ ಪಾಲಿಸಿದೆ. ನಿನ್ನೆಯ ಪಂದ್ಯದ ಟಾಸ್ ಮತ್ತು ಪಂದ್ಯ ಮುಕ್ತಾಯದ ಬಳಿಕ ಪಾಕ್ ಆಟಗಾರ್ತಿಯರೊಂದಿಗೆ ಭಾರತ ವನಿತೆಯರು ಹಸ್ತಾಲಾಘವ ಮಾಡದೇ ಡ್ರೆಸಿಂಗ್ ರೂಮ್ ಸೇರಿಕೊಂಡರು.
Advertisement