
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತ ತಂಡ ಮೊದಲ ದಿನದಾಟದ ಅಂತ್ಯಕ್ಕೆ ಕೇವಲ 2 ವಿಕೆಟ್ ಕಳೆದುಕೊಂಡು 318 ರನ್ ಕಲೆಹಾಕಿದ್ದು, ಬೃಹತ್ ಮೊತ್ತದತ್ತ ದಾಪುಗಾಲಿರಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಭಾರತ ತಂಡ ಕೂಡ ಉತ್ತಮ ಆರಂಭ ಪಡೆಯಿತು.
ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಮತ್ತು ಕೆಎಸ್ ರಾಹುಲ್ ಜೋಡಿ ಮೊದಲ ವಿಕೆಟ್ ಗೆ 58 ರನ್ ಗಳ ಕಲೆಹಾಕಿತು.
ಈ ಹಂತದಲ್ಲಿ ರಾಹುಲ್ ವಾರಿಕಾಮ್ ಅವರ ಅದ್ಭುತ ಎಸೆತದಲ್ಲಿ ಸ್ಟಂಪೌಟ್ ಆದರು. ಬಳಿಕ ಜೈಸ್ವಾಲ್ ಜೊತೆಗೂಡಿದ ಸಾಯಿಸುದರ್ಶನ್ ಕೂಡ ಉತ್ತಮ ಬ್ಯಾಟಿಂಗ್ ನಡೆಸಿದರು. 2ನೇ ವಿಕೆಟ್ ಗೆ ಈ ಜೋಡಿ ಬರೊಬ್ಬರಿ 193 ರನ್ ಗಳ ದಾಖಲೆಯ ಜೊತೆಯಾಟವಾಡಿತು. ಈ ಹಂತದಲ್ಲಿ 87 ರನ್ ಗಳಿಸಿ ಶತಕದತ್ತ ದಾಪುಗಾಲಿರಿಸಿದ್ದ ಸುದರ್ಶನ್ ಮತ್ತೆ ವರಿಕಾಮ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು.
ಬಳಿಕ ಕ್ರೀಸ್ ಗೆ ಆಗಮಿಸಿದ ನಾಯಕ ಶುಭ್ ಮನ್ ಗಿಲ್ ಯಾವುದೇ ಅಪಾಯವಾಗದಂತೆ ನೋಡಿಕೊಂಡರು. ಮುರಿಯದ 3ನೇ ವಿಕೆಟ್ ಗೆ ಜೈಸ್ವಾಲ್ ಮತ್ತು ಗಿಲ್ ಜೋಡಿ 67 ರನ್ ಕಲೆಹಾಕಿದ್ದು, 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದೆ.
ದಿನವಿಡೀ ಕಾಡಿದ ಜೈಸ್ವಾಲ್
ಇನ್ನು ಇಂದು ಭಾರತದ ಪರ ಅದ್ಭುತ ಬ್ಯಾಟಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ ದಿನವಿಡೀ ವಿಂಡೀಸ್ ಬೌಲರ್ ಗಳನ್ನು ಕಾಡಿದರು. ಇಂದು ಬರೊಬ್ಬರಿ 253 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 22 ಬೌಂಡರಿಗಳ ಸಹಿತ 173 ರನ್ ಕಲೆಹಾಕಿದ್ದಾರೆ.
ಅಚ್ಚರಿ ಎಂದರೆ ಸ್ಫೋಟಕ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ನಿಂದಲೇ ಖ್ಯಾತಿ ಗಳಿಸಿರುವ ಜೈಸ್ವಾಲ್ ಇಂದು ಒಂದೇ ಒಂದು ಸಿಕ್ಸರ್ ಸಿಡಿಸದೇ ನೆಲಮಟ್ಟದಲ್ಲಿಯೇ ಬ್ಯಾಟ್ ಬೀಸಿ ಗಮನ ಸೆಳೆದರು.
Advertisement