
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲೂ ಭಾರತದ ಮೇಲುಗೈ ಮುಂದುವರೆದಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ವಿಂಡೀಸ್ ಪಡೆಯನ್ನು ಕೇವಲ 248 ರನ್ ಗಳಿಗೆ ಆಲೌಟ್ ಮಾಡಿ ಫಾಲೋ ಆನ್ ಹೇರಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 248 ರನ್ ಗಳಿಗೆ ಆಲೌಟ್ ಆಗಿದೆ. ಆ ಮೂಲಕ ವಿಂಡೀಸ್ ತಂಡ 270 ರನ್ ಗಳ ಹಿನ್ನಡೆಯಲ್ಲಿದ್ದು ಭಾರತ ಫಾಲೋಆನ್ ಹೇರಿದೆ.
ಮೂರನೇ ದಿನದಾಟದಲ್ಲಿ ವೆಸ್ಟ್ ಇಂಡೀಸ್ 81.5 ಓವರ್‌ಗಳಲ್ಲಿ 248 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಆಲೌಟ್ ಆಗಿದೆ. ಎರಡನೇ ದಿನದ ಅಂತ್ಯಕ್ಕೆ ವಿಂಡೀಸ್ 140ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು.
ಇಂದು ಕೂಡ ಭಾರತೀಯ ಬೌಲರ್‌ಗಳ ನಿಖರ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಕೆಳ ಕ್ರಮಾಂಕದಲ್ಲಿ ಫಿಲಿಪ್ (24), ಖೇರಿ ಪಿಯರ್ (23) ಮತ್ತು ಸೀಲ್ಸ್ (13) ಕೊಂಚ ಹೊತ್ತು ಭಾರತೀಯ ಬೌಲರ್ ಗಳನ್ನು ಕಾಡಿದರೂ ಅಂತಿಮವಾಗಿ ಕುಲದೀಪ್ ಯಾದವ್ ಅಂತಿಮ ವಿಕೆಟ್ ಪಡೆದು ವಿಂಡೀಸ್ ತಂಡದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ತೆರೆ ಎಳೆದರು.
ಭಾರತದ ಪರ ಭಾರತದ ಪರ ಕುಲದೀಪ್ ಯಾದವ್ 82 ರನ್ನಿಗೆ ಐದು ವಿಕೆಟ್ ಕಿತ್ತು ಮಿಂಚಿದರು. ರವೀಂದ್ರ ಜಡೇಜ ಮೂರು ಮತ್ತು ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಗಳಿಸಿದರು.
ಪ್ರಸ್ತುತ 270ರನ್ ಹಿನ್ನಡೆಯಲ್ಲಿರುವ ವೆಸ್ಟ್ ಇಂಡೀಸ್ ಈ 270 ರನ್ ಗಳನ್ನು ಕಲೆಹಾಕಿ ಬಳಿಕ ಭಾರತಕ್ಕೆ ಗುರಿ ನೀಡಬೇಕಿದೆ.
Advertisement