
ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ 2025ರ ನಾಲ್ಕನೇ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ತಂಡ 330 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. ವಿಶಾಖಪಟ್ಟಣದ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಸ್ಮೃತಿ ಮಂದಾನ ಇತಿಹಾಸ ಸೃಷ್ಟಿಸಿದ್ದಾರೆ.
ಸ್ಮೃತಿ ಮಂಧಾನ ಮತ್ತು ಪ್ರತೀಕಾ ರಾವಲ್ ಈ ಪಂದ್ಯದಲ್ಲಿ ಭಾರತೀಯ ತಂಡಕ್ಕೆ ಬಲವಾದ ಆರಂಭವನ್ನು ನೀಡಿದರು. ಇಬ್ಬರೂ ಆಟಗಾರ್ತಿಯರು ಪವರ್‌ಪ್ಲೇನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಪವರ್‌ಪ್ಲೇಯಲ್ಲಿ ಭಾರತ ತಂಡವು ವಿಕೆಟ್ ಕಳೆದುಕೊಳ್ಳದೆ 58 ರನ್ ಗಳಿಸಿತು. ಈ ಅವಧಿಯಲ್ಲಿ ಸ್ಮೃತಿ ಪ್ರಮುಖ ದಾಖಲೆಯನ್ನು ಸ್ಥಾಪಿಸಿದರು. ಎಡಗೈ ಬ್ಯಾಟ್ಸ್‌ಮನ್ ಸ್ಮೃತಿ ಈ ವರ್ಷ ಮಹಿಳಾ ಏಕದಿನ ಪಂದ್ಯಗಳಲ್ಲಿ 1,000 ರನ್ ಪೂರೈಸಿ ದಾಖಲೆ ಬರೆದರು.
ಸ್ಮೃತಿ ಮಂಧಾನ ಕ್ಯಾಲೆಂಡರ್ ವರ್ಷದಲ್ಲಿ ಮಹಿಳಾ ಏಕದಿನ ಪಂದ್ಯಗಳಲ್ಲಿ 1,000 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ಬೇರೆ ಯಾವುದೇ ಮಹಿಳಾ ಆಟಗಾರ್ತಿ ಈ ಸಾಧನೆ ಮಾಡಿರಲಿಲ್ಲ. ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ 1997ರಲ್ಲಿ ಮಹಿಳಾ ಏಕದಿನ ಪಂದ್ಯಗಳಲ್ಲಿ 80.83 ಸರಾಸರಿಯಲ್ಲಿ 970 ರನ್ ಗಳಿಸಿದ್ದರು.
ಮಹಿಳಾ ಏಕದಿನ ಪಂದ್ಯಗಳಲ್ಲಿ ಸ್ಮೃತಿ ಮಂಧಾನ ಕೂಡ 5,000 ರನ್ ಪೂರೈಸಿದರು. ಈ ಸಾಧನೆ ಮಾಡಿದ ಎರಡನೇ ಭಾರತೀಯ ಮತ್ತು ವಿಶ್ವದ ಐದನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸ್ಮೃತಿ ಕೇವಲ 112 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದರು. ಮಹಿಳಾ ಏಕದಿನ ಪಂದ್ಯಗಳಲ್ಲಿ ಕಡಿಮೆ ಇನ್ನಿಂಗ್ಸ್ ಮತ್ತು ಎಸೆತಗಳಲ್ಲಿ 5,000 ರನ್ ತಲುಪಿದ ಆಟಗಾರ್ತಿ ಸ್ಮೃತಿ. ಅವರು ಸ್ಟೆಫಾನಿ ಟೇಲರ್ (129 ಇನ್ನಿಂಗ್ಸ್) ಮತ್ತು ಸುಜೀ ಬೇಟ್ಸ್ (6182 ಎಸೆತಗಳು) ಅವರ ದಾಖಲೆಗಳನ್ನು ಮುರಿದ್ದಾರೆ.
Advertisement