
ಅಡಿಲೇಡ್: ಆಸ್ಚ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 264 ರನ್ ಪೇರಿಸಿ ಆಸಿಸ್ ಗೆ ಗೆಲ್ಲಲು 265 ರನ್ ಗಳ ಸವಾಲಿನ ಗುರಿ ನೀಡಿದೆ.
ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡದ ನಾಯಕ ಮಿಚೆಲ್ ಮಾರ್ಷ್, ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾ, ಆರಂಭಿಕ ಆಘಾತಕ್ಕೆ ಒಳಗಾಯಿತು.
ಭಾರತ ತಂಡದ ನಾಯಕ ಶುಭಮನ್ ಗಿಲ್ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದರು.
ಆರಂಭಿಕ ಆಘಾತ
ನಾಯಕ ಗಿಲ್ 9 ರನ್ ಗಳಿಸಿ ಔಟಾದರೆ, ಕೊಹ್ಲಿ ಶೂನ್ಯ ಸುತ್ತಿ ಮತ್ತೆ ನಿರಾಶೆ ಮೂಡಿಸಿದರು. ಮಾಜಿ ನಾಯಕ ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಿದ ಗಿಲ್, 9 ಎಸೆತಗಳಲ್ಲಿ ಅಷ್ಟೇ ರನ್ ಗಳಿಸಿ ಔಟಾದರು. ಬಳಿಕ ಬಂದ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದರು.
ಕ್ಸೇವಿಯರ್ ಬರ್ಟ್ಲೆಟ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದ ಅವರು, ಪರ್ತ್ ಪಂದ್ಯದಂತೆ ಇಲ್ಲೂ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು.
ಅಯ್ಯರ್ ಜೊತೆ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್
ಇನ್ನು ಆರಂಭಿಕ ಆಘಾತದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಶ್ರೇಯಸ್ ಅಯ್ಯರ್ ಜೊತೆಗೂಡಿದ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದರು. ಮೂರನೇ ವಿಕೆಟ್ ಗೆ ಈ ಜೋಡಿ 136 ಎಸೆತಗಳಲ್ಲಿ 118 ರನ್ ಕಲೆಹಾಕಿತು. ಬಳಿಕ ರೋಹಿತ್ ಶರ್ಮಾ 97 ಎಸೆತಗಳಲ್ಲಿ 73 ರನ್ ಗಳಿಸಿದ್ದಾಗ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಅರ್ಧಶತಕ ಗಳಿಸಿದ್ದ ಶ್ರೇಯಸ್ ಅಯ್ಯರ್ (61)ಕೂಡ ಬಾರ್ಟ್ಲೆಟ್ ಬೌಲಿಂಗ್ ನಲ್ಲಿ ಔಟಾದರು.
ಈ ಹಂತದಲ್ಲಿ ಕೆಎಲ್ ರಾಹುಲ್ ಜೊತೆಗೂಡಿದ ಅಕ್ಸರ್ ಪಟೇಲ್ ಆಸಿಸ್ ಬೌಲರ್ ಗಳಿಗೆ ಕೊಂಚ ಪ್ರತಿರೋದ ತೋರಿದರು. 41 ಎಸೆತಗಳಲ್ಲಿ 44 ರನ್ ಗಳಿಸಿ ಆ್ಯಡಂ ಜಂಪಾ ಬೌಲಿಂಗ್ ನಲ್ಲಿ ಔಟಾದರು. ಈ ಹಂತದಲ್ಲಿ ಕೆಎಲ್ ರಾಹುಲ್ (11), ವಾಷಿಂಗ್ಟನ್ ಸುಂದರ್ (12)ಬೇಗನೆ ವಿಕೆಟ್ ಒಪ್ಪಿಸಿದರು.
ಉತ್ತಮವಾಗಿ ಆಡುತ್ತಿದ್ದ ನಿತೀಶ್ ಕುಮಾರ್ ರೆಡ್ಡಿ ಕೂಡ ಭಾರಿ ಹೊಡೆತಕ್ಕೆ ಕೈಹಾಕಿ ಜಂಪಾ ಬೌಲಿಂಗ್ ನಲ್ಲಿ ಸ್ಟಂಪೌಟ್ ಆಗಿದಾಗ ಭಾರತ ಮತ್ತೆ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ ಕೇವಲ 226 ಮಾತ್ರ ಗಳಿಸಿತ್ತು.
ಅಬ್ಬರಿಸಿದ ಹರ್ಷಿತ್ ರಾಣಾ, ಅರ್ಶ್ ದೀಪ್ ಸಿಂಗ್!
ಕೆಳ ಕ್ರಮಾಂಕದಲ್ಲಿ ಬಂದ ಹರ್ಷಿತ್ ರಾಣಾ ಮತ್ತು ಅರ್ಶ್ ದೀಪ್ ಸಿಂಗ್ ಈ ಹಂತದಲ್ಲಿ ಆಸಿಸ್ ಬೌಲರ್ ಗಳ ಮೇಲೆ ಸವಾರಿ ಮಾಡಿದರು. 9 ವಿಕೆಟ್ ಗೆ ಈ ಜೋಡಿ ಕೇವಲ 29 ಎಸೆತಗಳಲ್ಲಿ 37 ರನ್ ಗಳಿಸಿ ಭಾರತದ ರನ್ ಗಳಿಕೆಯನ್ನು 260ರನ್ ಗಡಿ ದಾಟುವಂತೆ ನೋಡಿಕೊಂಡರು.
ಹರ್ಷಿತ್ ರಾಣಾ 18 ಎಸೆತಗಳಲ್ಲಿ 24 ರನ್ ಚಚ್ಚಿದರೆ, ಅರ್ಶ್ ದೀಪ್ ಸಿಂಗ್ 14 ಎಸೆತಗಳಲ್ಲಿ 13ರನ್ ಗಳಿಸಿ ಸ್ಟಾರ್ಕ್ ಬೌಲಿಂಗ್ ನಲ್ಲಿ ಔಟಾದರು. ಅಂತಿಮವಾಗಿ ಭಾರತ ತಂಡ ನಿಗಧಿತ 50 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 264 ರನ್ ಕಲೆಹಾಕಿ ಆಸ್ಟ್ರೇಲಿಯಾಗೆ ಗೆಲ್ಲಲು 265 ರನ್ ಗಳ ಗುರಿ ನೀಡಿದೆ.
ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ 4 ವಿಕೆಟ್ ಕಬಳಿಸಿದರೆ, ಬಾರ್ಟ್ಲೆಟ್ 3, ಮಿಚೆಲ್ ಸ್ಟಾರ್ಕ್ 2 ವಿಕೆಟ್ ಪಡೆದರು.
Advertisement