
ವಿಶ್ವಕಪ್ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ, ನ್ಯೂಜಿಲೆಂಡ್ ವಿರುದ್ಧ 49 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 340 ರನ್ ಗಳಿಸಿತು. ಮಳೆಯಿಂದಾಗಿ ಭಾರತದ ಇನ್ನಿಂಗ್ಸ್ ಅನ್ನು 50 ಓವರ್‌ಗಳ ಬದಲು 49 ಓವರ್‌ಗಳಿಗೆ ಇಳಿಸಲಾಯಿತು. ಡಿಎಲ್ಎಸ್ ನಿಯಮದಡಿ ನ್ಯೂಜಿಲೆಂಡ್‌ಗೆ 44 ಓವರ್‌ಗಳಲ್ಲಿ ಗೆಲ್ಲಲು 325 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ 8 ವಿಕೆಟ್ ನಷ್ಟಕ್ಕೆ 271 ರನ್ ಪೇರಿಸಿ ಸೋಲು ಅನುಭವಿಸಿತು.
ನ್ಯೂಜಿಲ್ಯಾಂಡ್ ಗೆ ಆರಂಭಿಕ ಆಘಾತ ಎದುರಾಯಿತು. ಸೂಜಿ ಬೇಟ್ಸ್ 1 ರನ್ ಗಳಿಸಿ ಔಟಾದರು. ಜಾರ್ಜಿಯಾ ಪ್ಲಿಮ್ಮರ್ 30, ಅಮೆಲಿಯಾ ಕೆರ್ 45, ಸೋಫಿ ಡಿವೈನ್ 6, ಬ್ರೂಕ್ ಹ್ಯಾಲಿಡೇ 81, ಮ್ಯಾಡಿ ಗ್ರೀನ್ 18 ರನ್ ಗಳಿಸಿ ಔಟಾದರು.
ಇಸಾಬೆಲ್ಲಾ ಗೇಜ್ ಅಜೇಯ 65 ರನ್ ಗಳಿಸಿದರು. ಭಾರತದ ಪರ ಬೌಲಿಂಗ್ ನಲ್ಲಿ ರೇಣುಕಾಸಿಂಗ್, ಕ್ರಾಂತಿ ಗೌಡ್ ತಲಾ 2 ವಿಕೆಟ್ ಪಡೆದರೇ ನೇಹಾ ರಾಣಾ, ಚರಣಿ, ಪ್ರತೀಕಾ ರಾವಲ್ ತಲಾ 1 ವಿಕೆಟ್ ಪಡೆದರು. ಅಂತಿಮವಾಗಿ ನ್ಯೂಜಿಲ್ಯಾಂಡ್ ನಿಗದಿತ ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 53 ರನ್ ಗಳಿಂದ ಸೋಲು ಅನುಭವಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ, ಪ್ರತಿಕಾ ರಾವಲ್ ಮತ್ತು ಸ್ಮೃತಿ ಮಂಧಾನ ಭಾರತ ತಂಡಕ್ಕೆ ಬಲವಾದ ಆರಂಭವನ್ನು ನೀಡಿದರು. ಇಬ್ಬರೂ ಮೊದಲ ವಿಕೆಟ್‌ಗೆ 212 ರನ್‌ಗಳ ಜೊತೆಯಾಟ ನೀಡಿದರು. ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಇದು ಅತ್ಯಧಿಕ ಆರಂಭಿಕ ಜೊತೆಯಾಟವಾಗಿದೆ. ಈ ಇಬ್ಬರು ಬ್ಯಾಟರ್ ಗಳು ODI ಪಂದ್ಯಗಳಲ್ಲಿ 200 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಆರಂಭಿಕ ಪಾಲುದಾರಿಕೆಯನ್ನು ಹಂಚಿಕೊಂಡಿರುವುದು ಇದು ಎರಡನೇ ಬಾರಿ. ರಾವಲ್ ಮತ್ತು ಮಂಧಾನ ಜೋಡಿ ರೋಹಿತ್ ಶರ್ಮಾ ಮತ್ತು ಗಿಲ್ ಅವರನ್ನು ಹಿಂದಿಕ್ಕಿ ಒಂದೇ ವರ್ಷದಲ್ಲಿ ಆರಂಭಿಕ ಆಟಗಾರರಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಸ್ಮೃತಿ ಮಂಧಾನ 95 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 10 ಬೌಂಡರಿಗಳೊಂದಿಗೆ 109 ರನ್ ಗಳಿಸಿದರು. ಇದು ಮಂಧಾನ ಅವರ 14ನೇ ಏಕದಿನ ಶತಕ ಮತ್ತು ಈ ವರ್ಷ ಅವರ 5ನೇ ಶತಕವಾಗಿದೆ. ಪ್ರತಿಕಾ ರಾವಲ್ 134 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 122 ರನ್ ಗಳಿಸಿದರು. ಈ ಎರಡರ ಜೊತೆಗೆ, ಜೆಮಿಮಾ ರೊಡ್ರಿಗಸ್ 55 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ ಅಜೇಯ 76 ರನ್ ಗಳಿಸಿದರು. ಭಾರತ 49 ಓವರ್‌ಗಳಲ್ಲಿ 3 ವಿಕೆಟ್‌ಗೆ 340 ರನ್ ಗಳಿಸಿತು.
ಅಂಕಪಟ್ಟಿಯಲ್ಲಿ ಭಾರತ 6 ಪಂದ್ಯಗಳಲ್ಲಿ 3 ಪಂದ್ಯಗಳ ಗೆಲುವಿನ ಮೂಲಕ 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ನ್ಯೂಜಿಲ್ಯಾಂಡ್ 6 ಪಂದ್ಯಗಳಲ್ಲಿ ಒಂದು ಪಂದ್ಯದ ಗೆಲುವಿನೊಂದಿಗೆ ನಾಲ್ಕು ಅಂಕಗಳನ್ನು ಪಡೆದು ಐದನೇ ಸ್ಥಾನದಲ್ಲಿದೆ.
Advertisement