

ನವದೆಹಲಿ: ಭಾರತ ಏಷ್ಯಾ ಕಫ್ ಗೆದ್ದು ಇನ್ನು ನಾಲ್ಕು ದಿನ ಕಳೆದರೆ ಒಂದು ತಿಂಗಳಾಗುತ್ತದೆ. ಆದ್ರೂ ಇನ್ನೂ ಟ್ರೋಫಿ ಸಿಕ್ಕಿಲ್ಲ. ಸೆಪ್ಟೆಂಬರ್ 28 ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯದ ಮುಕ್ತಾಯದ ನಂತರ ನಡೆಯುತ್ತಿರುವ 'ಏಷ್ಯಾ ಕಪ್' ಟ್ರೋಫಿ ನಾಟಕ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಮೂಲಗಳ ಪ್ರಕಾರ, ಏಷ್ಯಾ ಕಪ್ ಟ್ರೋಫಿಯನ್ನು ದುಬೈನಲ್ಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಧಾನ ಕಚೇರಿಯಿಂದ ತೆಗೆದಿದ್ದು, ಅಬುಧಾಬಿಯ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟೀಂ ಇಂಡಿಯಾ ಆಟಗಾರರು ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸುವುದರೊಂದಿಗೆ ಏಷ್ಯಾಕಪ್ ಟ್ರೋಫಿಯ ಮೇಲಿನ ಬಿಕ್ಕಟ್ಟು ಪ್ರಾರಂಭವಾಯಿತು.
ಫೈನಲ್‌ನಲ್ಲಿ ಐದು ವಿಕೆಟ್‌ಗಳ ಜಯದ ನಂತರ ಉಭಯ ರಾಷ್ಟ್ರಗಳ ನಡುವಿನ ಗಡಿಯಾಚೆಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಆಂತರಿಕ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿರುವ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತದ ಆಟಗಾರರು ನಿರಾಕರಿಸಿದರು. ಭಾರತ ಗೆಲುವಿನ ನಂತರ ಟ್ರೋಫಿ ವಿತರಣಾ ಸಮಾರಂಭ 90 ನಿಮಿಷ ವಿಳಂಬವಾಯಿತು. ಇದರಿಂದ ಮುಜುಗರಕ್ಕೊಳಗಾದ ನಖ್ವಿ, ಏಷ್ಯಾಕಪ್ ಟ್ರೋಫಿಯನ್ನು ಭಾರತಕ್ಕೆ ನೀಡಲು ನಿರಾಕರಿಸಿದ್ದರು.
ಭಾರತ ಏಷ್ಯಾಕಪ್ ಟ್ರೋಫಿ ಎತ್ತಿಹಿಡಿಯಲು ಕಾಯುತ್ತಿರುವಾಗ ಇಡೀ ಕಥೆ ಈಗ ಹೊಸ ತಿರುವು ಪಡೆದುಕೊಂಡಿದೆ. ಅಧಿಕಾರಿಗಳು ಕಳೆದ ವಾರ ದುಬೈನಲ್ಲಿರುವ ಎಸಿಸಿ ಪ್ರಧಾನ ಕಚೇರಿಗೆ ಭೇಟಿ ನೀಡಿ ಪದಕ ಬಗ್ಗೆ ಕೇಳಿದ್ದಾಗ ಟ್ರೋಫಿಯನ್ನು ಅಬುಧಾಬಿಯ ಬೇರೆ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
"ಕೆಲವು ದಿನಗಳ ಹಿಂದೆ ಬಿಸಿಸಿಐ ಅಧಿಕಾರಿಯೊಬ್ಬರು ACC ಪ್ರಧಾನ ಕಚೇರಿಗೆ ಭೇಟಿ ನೀಡಿದ್ದು, ಟ್ರೋಫಿಯ ಬಗ್ಗೆ ವಿಚಾರಿಸಿದಾಗ, ಅದನ್ನು ಇಲ್ಲಿಂದ ತೆಗೆದು, ಅಬುಧಾಬಿಯ ಯಾವುದೋ ಸ್ಥಳದಲ್ಲಿ ಮೋಶಿನ್ ನಖ್ವಿ ವಶದಲ್ಲಿದೆ ಎಂದು ಸಿಬ್ಬಂದಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಕಳೆದ ತಿಂಗಳು ನಡೆದ ACC ಸಭೆ ನಂತರ ನಖ್ವಿ, ಬಿಸಿಸಿಐ ಕ್ಷಮೆ ಕೇಳಿರುವುದಾಗಿ ವರದಿಯಾಗಿತ್ತು. ಆದರೆ ತದನಂತರ ನಖ್ವಿ ಅಂತಹ ವರದಿಗಳನ್ನು ತಳ್ಳಿಹಾಕಿದ್ದರು. ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಎಸಿಸಿ ಸಭೆಯಲ್ಲಿ ಯಾವುದೇ ಔಪಚಾರಿಕ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದು ವರದಿಗಳು ಹೇಳಿದ್ದವು.
Advertisement