
ನವದೆಹಲಿ: ಏಷ್ಯಾ ಕಪ್ ಟ್ರೋಫಿ ಕುರಿತಾದ ಬಿಕ್ಕಟ್ಟು ಇನ್ನೂ ಮುಂದುವರಿದಿದ್ದು, ಅಫ್ಗಾನಿಸ್ತಾನ ಮತ್ತು ಶ್ರೀಲಂಕಾ ಮಂಡಳಿಗಳ ಬೆಂಬಲದೊಂದಿಗೆ ಬಿಸಿಸಿಐ ಹೊಸ ಸಂದೇಶವನ್ನು ಕಳುಹಿಸಿದ್ದರೂ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಟ್ರೋಫಿ ನೀಡಲು ನಿರಾಕರಿಸಿದ್ದಾರೆ.
ಬಿಸಿಸಿಐ ಪ್ರತಿನಿಧಿಯೊಬ್ಬರು ದುಬೈನಲ್ಲಿರುವ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ತಮ್ಮಿಂದಲೇ ಟ್ರೋಫಿಯನ್ನು ಪಡೆಯಬೇಕೆಂದು ನಖ್ವಿ ಒತ್ತಾಯಿಸಿದ್ದಾರೆ. ಆದರೆ, ಭಾರತೀಯ ಮಂಡಳಿ ಆ ನಿಲುವನ್ನು ತಿರಸ್ಕರಿಸಿದೆ ಎಂದು ಎಸಿಸಿಯ ಉನ್ನತ ಮೂಲವೊಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದೆ.
ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐ ಈ ವಿಷಯವನ್ನು ಪ್ರಸ್ತಾಪಿಸಲಿದೆ.
'ಬಿಸಿಸಿಐ ಕಾರ್ಯದರ್ಶಿ, ಬಿಸಿಸಿಐನ ಎಸಿಸಿ ಪ್ರತಿನಿಧಿ ರಾಜೀವ್ ಶುಕ್ಲಾ ಮತ್ತು ಶ್ರೀಲಂಕಾ ಕ್ರಿಕೆಟ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಇತರ ಮಂಡಳಿಗಳ ಪ್ರತಿನಿಧಿಗಳು ಕಳೆದ ವಾರ ಭಾರತಕ್ಕೆ ಟ್ರೋಫಿಯನ್ನು ಹಸ್ತಾಂತರಿಸುವ ಕುರಿತು ಎಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿದ್ದರು' ಎಂದು ಎಸಿಸಿ ಮೂಲಗಳು ತಿಳಿಸಿವೆ.
'ಆದರೆ, ಬಿಸಿಸಿಐನಿಂದ ಯಾರಾದರೂ ದುಬೈಗೆ ಬಂದು ತಮ್ಮ ಕೈಯಿಂದಲೇ ಟ್ರೋಫಿಯನ್ನು ತೆಗೆದುಕೊಳ್ಳಬೇಕು ಎಂದು ನಖ್ವಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಸಿಸಿಐ ಅವರಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂದು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಆದ್ದರಿಂದ ಈ ವಿಷಯವನ್ನು ಐಸಿಸಿ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ' ಎಂದು ಅವರು ಹೇಳಿದರು.
ಐಸಿಸಿಯ ನೇತೃತ್ವವನ್ನು ಮಾಜಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವಹಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ 2025ರ ಫೈನಲ್‌ನಲ್ಲಿ ಜಯ ಗಳಿಸಿದ ಭಾರತವು ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತು. ಇದರಿಂದ ಟ್ರೋಫಿಯೊಂದಿಗೆ ನಖ್ವಿ ಮೈದಾನ ತೊರೆದಿದ್ದರು. ಬಳಿಕ ಟ್ರೋಫಿಯನ್ನು ACC ಪ್ರಧಾನ ಕಚೇರಿಯಲ್ಲಿ ಇರಿಸಲಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಗೌರವ ಸಲ್ಲಿಸುವ ಸಂಕೇತವಾಗಿ ಏಷ್ಯಾಕಪ್ ಉದ್ದಕ್ಕೂ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿದ್ದರು. ಫೈನಲ್ ಸೇರಿದಂತೆ ಮೂರು ಭಾರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು.
Advertisement