
ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ 2025ರ ಫೈನಲ್‌ನಲ್ಲಿ ಭಾರತ ಗೆಲುವು ಸಾಧಿಸಿದ್ದು, ಟ್ರೋಫಿ ವಿಚಾರವಾಗಿ ವಿವಾದ ಭುಗಿಲೆದ್ದಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡವು ಎಸಿಸಿ ಮುಖ್ಯಸ್ಥ, ಪಿಸಿಬಿ ಮುಖ್ಯಸ್ಥರೂ ಆಗಿರುವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಬಳಿಕ ನಖ್ವಿ ಟ್ರೋಫಿಯೊಂದಿಗೆ ಮೈದಾನದಿಂದ ಹೊರನಡೆದರು.
ಭಾರತ ತಂಡದ ಗೆಲುವಿನ ನಂತರ, ಪ್ರಧಾನಿ ನರೇಂದ್ರ ಮೋದಿ ತಮ್ಮ ತಂಡವನ್ನು ಅಭಿನಂದಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 'ಆಟದ ಮೈದಾನದಲ್ಲಿ ಆಪರೇಷನ್ ಸಿಂಧೂರ. ಅದೇ ಫಲಿತಾಂಶ - ಭಾರತ ಗೆದ್ದಿದೆ! ನಮ್ಮ ಕ್ರಿಕೆಟಿಗರಿಗೆ ಅಭಿನಂದನೆಗಳು' ಎಂದು ಬರೆದಿದ್ದಾರೆ.
ಪಾಕಿಸ್ತಾನದ ಆಂತರಿಕ ಸಚಿವರೂ ಆಗಿರುವ ನಖ್ವಿ ಈ ಟ್ವೀಟ್ ಅನ್ನು ಸಹಿಸದೆ, ತೀರಾ ಕಳಪೆಯಾಗಿ ಪ್ರತಿಕ್ರಿಯಿಸಿದ್ದಾರೆ. 'ಯುದ್ಧವು ನಿಮ್ಮ ಹೆಮ್ಮೆಯ ಮಾನದಂಡವಾಗಿದ್ದರೆ, ಪಾಕಿಸ್ತಾನದ ಕೈಯಲ್ಲಿ ನಿಮ್ಮ ಅವಮಾನಕರ ಸೋಲುಗಳನ್ನು ಇತಿಹಾಸವು ಈಗಾಗಲೇ ದಾಖಲಿಸಿದೆ. ಯಾವುದೇ ಕ್ರಿಕೆಟ್ ಪಂದ್ಯವು ಆ ಸತ್ಯವನ್ನು ಪುನಃ ಬರೆಯಲು ಸಾಧ್ಯವಿಲ್ಲ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ದೇವಜಿತ್ ಸೈಕಿಯಾ ಪ್ರತಿಕ್ರಿಯೆ
ಮತ್ತೊಂದೆಡೆ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ವೇದಿಕೆಯಿಂದ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದಕ್ಕಾಗಿ ನಖ್ವಿ ಅವರನ್ನು ತರಾಟೆಗೆ ತೆಗೆದುಕೊಂಡರು. 'ಪಾಕಿಸ್ತಾನದ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಎಸಿಸಿ ಅಧ್ಯಕ್ಷರಿಂದ ನಾವು ಏಷ್ಯಾ ಕಪ್ 2025 ಟ್ರೋಫಿಯನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇವೆ. ಅದು ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು' ಎಂದಿದ್ದಾರೆ.
'ಆದರೆ, ಇದು ಅವರಿಗೆ ಟ್ರೋಫಿ ಮತ್ತು ಪದಕಗಳನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುವ ಹಕ್ಕನ್ನು ನೀಡುವುದಿಲ್ಲ. ಇದು ಅತ್ಯಂತ ದುರದೃಷ್ಟಕರ ಮತ್ತು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ. ಟ್ರೋಫಿ ಮತ್ತು ಪದಕಗಳನ್ನು ಆದಷ್ಟು ಬೇಗ ಭಾರತಕ್ಕೆ ಹಿಂದಿರುಗಿಸುತ್ತಾರೆ ಎಂದು ನಾವು ಭಾವಿಸುತ್ತೇವೆ' ಎಂದು ಸೈಕಿಯಾ ಹೇಳಿದರು.
ಏಷ್ಯಾ ಕಪ್ ಟ್ರೋಫಿಯನ್ನು ಸ್ವೀಕರಿಸಲು ಭಾರತ ನಿರಾಕರಿಸಿದ್ದರಿಂದ ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು, ಟ್ರೋಫಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದು, ಈ ಬಗ್ಗೆ ಐಸಿಸಿಗೆ ದೂರು ನೀಡಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ.
Advertisement