
ಏಷ್ಯಾ ಕಪ್ 2025ರ ಪಂದ್ಯಾವಳಿಯಿಂದ ಆ್ಯಂಡಿ ಪೈಕ್ರಾಫ್ಟ್ ಅವರನ್ನು ಮ್ಯಾಚ್ ರೆಫರಿಗಳ ಸಮಿತಿಯಿಂದ ತೆಗೆದುಹಾಕುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಡಿದ ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪರಿಗಣಿಸುವ ಸಾಧ್ಯತೆಯಿಲ್ಲ. ಹ್ಯಾಂಡ್‌ಶೇಕ್ ವಿವಾದ ವಿಚಾರದಲ್ಲಿ ಪೈಕ್ರಾಫ್ಟ್ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಪಾಕಿಸ್ತಾನಕ್ಕಿಂತ ಭಾರತಕ್ಕೆ ಒಲವು ತೋರಿದ್ದಾರೆ ಎಂದು ಪಿಸಿಬಿ ಆರೋಪಿಸಿತ್ತು.
ಕ್ರಿಕ್‌ಬಜ್ ಪ್ರಕಾರ, ಪಿಸಿಬಿಯ ಆರೋಪವನ್ನು ಐಸಿಸಿ ಒಪ್ಪುವುದಿಲ್ಲ. ಘಟನೆಯಲ್ಲಿ ಪೈಕ್ರಾಫ್ಟ್ ಅವರ ಯಾವುದೇ ಪಾತ್ರವಿಲ್ಲ. ಅವರು ಭಾರತ ತಂಡದ ಸಂದೇಶವನ್ನು ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ ಅವರಿಗೆ ತಿಳಿಸಿದರು ಅಷ್ಟೇ ಎನ್ನಲಾಗಿದೆ.
ಟಾಸ್ ಸಮಯದಲ್ಲಿ ಸಲ್ಮಾನ್ ಅಸಮಾಧಾನಗೊಂಡಂತೆ ಕಾಣಲಿಲ್ಲ. ಆದರೆ, ಸೂರ್ಯಕುಮಾರ್ ಯಾದವ್ ಮತ್ತು ತಂಡ ಪಂದ್ಯದ ನಂತರ ಕೈಕುಲುಕಲು ನಿರಾಕರಿಸಿದ ನಂತರ, ಅವರು ಪಂದ್ಯದ ನಂತರದ ಪತ್ರಿಕಾಗೋಷ್ಠಿಗೆ ಬರಲು ನಿರಾಕರಿಸಿದರು.
'ಐಸಿಸಿ ನೀತಿ ಸಂಹಿತೆ ಮತ್ತು ಕ್ರಿಕೆಟ್ ಸ್ಫೂರ್ತಿಗೆ ಸಂಬಂಧಿಸಿದ ಎಂಸಿಸಿ ಕಾನೂನುಗಳನ್ನು ಮ್ಯಾಚ್ ರೆಫರಿ ಉಲ್ಲಂಘಿಸಿದ್ದಾರೆ ಎಂದು ಪಿಸಿಬಿ ಐಸಿಸಿಗೆ ದೂರು ನೀಡಿದೆ. ಏಷ್ಯಾ ಕಪ್‌ನಿಂದ ಮ್ಯಾಚ್ ರೆಫರಿಯನ್ನು ತಕ್ಷಣ ತೆಗೆದುಹಾಕಬೇಕೆಂದು ಒತ್ತಾಯಿಸಿದೆ' ಎಂದು ನಖ್ವಿ ಐಸಿಸಿಗೆ ಪತ್ರ ಬರೆದಿದ್ದರು.
ಪಿಸಿಬಿ ಬೇಡಿಕೆ ಈಡೇರದಿದ್ದರೆ ಪಾಕಿಸ್ತಾನವು ಯುಎಇ ವಿರುದ್ಧದ ಪಂದ್ಯದಿಂದ ಹಿಂದೆ ಸರಿಯಬಹುದು ಎಂದು ವರದಿಯಾಗಿದೆ. ಸದ್ಯದ ಪರಿಸ್ಥಿತಿಯ ಪ್ರಕಾರ, ಪಾಕಿಸ್ತಾನ ಮತ್ತು ಯುಎಇ ಗ್ರೂಪ್ ಎ ನಿಂದ ಎರಡನೇ ಸೂಪರ್ ಫೋರ್ ಸ್ಥಾನಕ್ಕಾಗಿ ಹೋರಾಡಲಿವೆ. ಯುಎಇ ಮತ್ತು ಪಾಕಿಸ್ತಾನದ ವಿರುದ್ಧ ಪಂದ್ಯ ಗೆದ್ದ ನಂತರ ಭಾರತ ಈಗಾಗಲೇ ಅರ್ಹತೆ ಪಡೆದಿದೆ.
ಪಿಸಿಬಿ ಮತ್ತು ನಖ್ವಿ ಈ ವರ್ಚುವಲ್ ನಾಕೌಟ್ ಪಂದ್ಯದಿಂದ ಹೊರಬರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಇದರರ್ಥ ಪಾಕಿಸ್ತಾನವು ಗ್ರೂಪ್ ಹಂತದಲ್ಲೇ ಏಷ್ಯಾ ಕಪ್‌ನಿಂದ ಹೊರಗುಳಿಯಬೇಕಾಗುತ್ತದೆ.
Advertisement