
ಚಂಡೀಗಢ: ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ವನಿತೆಯರ ತಂಡದ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಬ್ಯಾಟರ್ ಸ್ಮೃತಿಮಂದಾನ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.
ಚಂಡೀಗಢದ ಮುಲ್ಲನ್ ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಸ್ಮೃತಿಮಂದಾನ ಈ ಸಾಧನೆ ಮಾಡಿದ್ದು, ಭಾರತ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.5 ಓವರ್ ನಲ್ಲಿ 292 ರನ್ ಗಳಿಸಿ ಆಲೌಟ್ ಆಯಿತು. ಭಾರತದ ಪರ ಸ್ಮೃತಿ ಮಂದಾನ 91 ಎಸೆತಗಳಲ್ಲಿ 4ಸಿಕ್ಸರ್ ಮತ್ತು 14 ಬೌಂಡರಿಗಳ ನೆರವಿನಿಂದ 117 ರನ್ ಪೇರಿಸಿದರು. ಅವರಿಗೆ ದೀಪ್ತಿ ಶರ್ಮಾ (40 ರನ್) ಉತ್ತಮ ಸಾಥ್ ನೀಡಿದರು.
ಸ್ಮೃತಿ ಭರ್ಜರಿ ಶತಕ, ಹಲವು ದಾಖಲೆ
ಇನ್ನು ಈ ಪಂದ್ಯದಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಸ್ಮೃತಿ ಮಂದಾನ ಕೇವಲ 77 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಅವರ 12ನೇ ಏಕದಿನ ಶತಕವಾಗಿದ್ದು, ಭಾರತದ ಪರ ಬಂದ 2ನೇ ವೇಗದ ಶತಕ ಕೂಡ ಇದಾಗಿದೆ. ಇದಕ್ಕೂ ಮೊದಲು ಇದೇ ಸ್ಮೃತಿ ಮಂದಾನ ರಾಜ್ ಕೋಟ್ ನಲ್ಲಿ ಐರ್ಲೆಂಡ್ ವಿರುದ್ಧ 70 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಭಾರತ ವನಿತೆಯರ ತಂಡದ ಪರ ದಾಖಲಾದ ವೇಗದ ಶತಕವಾಗಿದೆ.
ಎಲೈಟ್ ಗ್ರೂಪ್ ಸೇರ್ಪಡೆ
ಇನ್ನು ಇಂದು ಮಂದಾನ ಸಿಡಿಸಿದ ಶತಕ ಅವರ 12ನೇ ಏಕದಿನ ಶತಕವಾಗಿದ್ದು, ಆ ಮೂಲಕ ಸ್ಮೃತಿ ಮಂದಾನ ಏಕದಿನದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ಶತಕ ಸಿಡಿಸಿದ ಆಟಗಾರ್ತಿಯರ ಎಲೈಟ್ ಪಟ್ಟಿ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮೊದಲು ನ್ಯೂಜಿಲೆಂಡ್ ತಂಡದ ಸೂಜಿಬೆಟ್ಸ್ (13 ಶತಕ), ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ (15) ಈ ಪಟ್ಟಿಯಲ್ಲಿದ್ದು ಇದೀಗ ಸ್ಮೃತಿ ಮಂದಾನ ಸೇರ್ಪಡೆಯಾಗಿದ್ದಾರೆ.
ಮೊದಲ ಆಟಗಾರ್ತಿ
ಮಂದಾನ 2025ರಲ್ಲಿ ತಮ್ಮ ಮೂರನೇ ಮಹಿಳಾ ಏಕದಿನ ಶತಕವನ್ನು ಪೂರೈಸಿದ್ದು, ಎರಡು ವಿಭಿನ್ನ ಕ್ಯಾಲೆಂಡರ್ ವರ್ಷಗಳಲ್ಲಿ ಮೂರು ಅಥವಾ ಹೆಚ್ಚಿನ ಶತಕಗಳನ್ನು ಗಳಿಸಿದ ಮೊದಲ ಮಹಿಳಾ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 2024 ರಲ್ಲಿಯೂ ಸಹ ಮಂದಾನ ಇದೇ ದಾಖಲೆ ನಿರ್ಮಿಸಿದ್ದರು.
Advertisement