
ಬುಧವಾರ ಯುಎಇ ವಿರುದ್ಧ 41 ರನ್‌ಗಳ ಜಯ ಸಾಧಿಸಿದ ನಂತರ ಪಾಕಿಸ್ತಾನ ಭಾರತದೊಂದಿಗೆ ಮತ್ತೊಂದು ಹಣಾಹಣಿಗೆ ಸಜ್ಜಾಗಿದೆ. ಪಾಕಿಸ್ತಾನ ಮತ್ತು ಯುಎಇ ವಿರುದ್ಧ ಜಯಗಳಿಸಿದ ನಂತರ ಭಾರತ ಈಗಾಗಲೇ ಏಷ್ಯಾಕಪ್ 2025ರ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದಿತ್ತು. ಪಾಕ್ ವಿರುದ್ಧ ಯುಎಇ ಪಂದ್ಯದಲ್ಲಿನ ವಿಜೇತರು ಟೀಂ ಇಂಡಿಯಾ ವಿರುದ್ಧ ಸೆಣಸಬೇಕಿತ್ತು. ಇದೀಗ ಸಲ್ಮಾನ್ ಅಲಿ ಅಘಾ ಅವರ ತಂಡವು ಭಾರತವನ್ನು ಎದುರಿಸಲು ಸಿದ್ಧವಾಗಿದೆ.
ಸೂಪರ್ 4 ಗೆ ಅರ್ಹತೆ ಪಡೆಯಲು ಪಾಕಿಸ್ತಾನ ಯುಎಇ ವಿರುದ್ಧ ಗೆಲ್ಲಲೇಬೇಕಿತ್ತು. ಪಂದ್ಯದ ರೆಫರಿ ಆ್ಯಂಡಿ ಪೈಕ್ರಾಫ್ಟ್ ವಿರುದ್ಧ ಪಿಸಿಬಿ ನೀಡಿದ ದೂರಿನ ಮೇರೆಗೆ ಪಂದ್ಯ ಆರಂಭ ವಿಳಂಬವಾಯಿತು. ನಿಗದಿತ ಸಮಯಕ್ಕಿಂತ ಒಂದು ಗಂಟೆಗೂ ಹೆಚ್ಚು ಸಮಯ ತಡವಾಗಿ ಆರಂಭವಾದ ಪಂದ್ಯಕ್ಕೆ ಜಿಂಬಾಬ್ವೆ ಆಟಗಾರ ಕ್ಷಮೆಯಾಚಿಸಿದರು. ಪಾಕಿಸ್ತಾನ ಬ್ಯಾಟಿಂಗ್‌ನಲ್ಲಿ ಎಡವಿತು.
ಇದಕ್ಕೆ ಪ್ರತಿಕ್ರಿಯೆಯಾಗಿ, ಯುಎಇ ತಂಡವು ಉತ್ತಮ ಹೋರಾಟ ನೀಡಿತು. ಆದರೆ, ಅಂತಿಮವಾಗಿ ಅವರು 105 ರನ್‌ಗಳಿಗೆ ಆಲೌಟ್ ಆದರು. 20 ರನ್‌ಗಳಿಗೆ ತಮ್ಮ ಕೊನೆಯ 7 ವಿಕೆಟ್‌ಗಳನ್ನು ಕಳೆದುಕೊಂಡರು. ಪಾಕಿಸ್ತಾನ ಈಗ ಎರಡನೇ ಸ್ಥಾನ ಪಡೆಯುವುದು ಖಚಿತವಾಗಿದ್ದು, ಭಾರತ ಗ್ರೂಪ್ ಎ ನಲ್ಲಿ ಮೊದಲ ಸ್ಥಾನ ಪಡೆದಿದೆ. ಉಭಯ ತಂಡಗಳು ಸೆಪ್ಟೆಂಬರ್ 21 ರ ಭಾನುವಾರ ದುಬೈನಲ್ಲಿ ಮುಖಾಮುಖಿಯಾಗಲಿವೆ.
ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿತು. ಪಾಕಿಸ್ತಾನ ಕೇವಲ 127 ರನ್‌ಗಳಿಗೆ ಸೀಮಿತವಾಯಿತು. ಕುಲದೀಪ್ ಯಾದವ್ ಅವರ ಆಕರ್ಷಕ ಸ್ಪೆಲ್ ಪಾಕಿಸ್ತಾನವನ್ನು ಕಟ್ಟಿಹಾಕುವಲ್ಲಿ ನೆರವಾಯಿತು. ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರ ಅಮೂಲ್ಯ ಬ್ಯಾಟಿಂಗ್ ಕೊಡುಗೆಗಳ ಮೂಲಕ ಭಾರತ ಆ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿತು.
ಸೂರ್ಯಕುಮಾರ್ ಯಾದವ್ ಮತ್ತು ಸಲ್ಮಾನ್ ಅಲಿ ಅಘಾ ಅವರು ಟಾಸ್ ಸಮಯದಲ್ಲಿ ಕೈಕುಲುಕಲಿಲ್ಲ. ನಂತರ, ಭಾರತ ತಂಡವು ಪಂದ್ಯದ ನಂತರವೂ ಎದುರಾಳಿ ತಂಡದ ಆಟಗಾರರಿಗೆ ಹ್ಯಾಂಡ್‌ಶೇಕ್ ನೀಡಲು ನಿರಾಕರಿಸಿತು. ಇದು ತೀವ್ರ ವಿವಾದಕ್ಕೆ ಕಾರಣವಾಯಿತು. ಟೀಂ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಈ ಗೆಲುವನ್ನು ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಅರ್ಪಿಸಿದರು.
ಬಳಿಕ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್ ಅವರನ್ನು ಏಷ್ಯಾ ಕಪ್ 2025 ಪಂದ್ಯಾವಳಿಯಿಂದಲೇ ಕೈಬಿಡುವಂತೆ ಪಿಸಿಬಿ ಅಧಿಕೃತವಾಗಿ ಕೇಳಿಕೊಂಡಿತು ಮತ್ತು ಏಷ್ಯಾ ಕಪ್‌ನಿಂದ ಸಂಪೂರ್ಣವಾಗಿ ಹೊರಗುಳಿಯುವುದಾಗಿ ಬೆದರಿಕೆ ಹಾಕಿತು. ಐಸಿಸಿ ಜಿಎಂ ವಾಸಿಮ್ ಖಾನ್ ಅವರ ಸಮ್ಮುಖದಲ್ಲಿ ಮ್ಯಾಚ್ ರೆಫರಿ ಫೈಕ್ರಾಫ್ಟ್ ಅವರು ಮೈಕ್ ಹೆಸ್ಸನ್ ಮತ್ತು ನಾಯಕ ಸಲ್ಮಾನ್ ಅಘಾ ಅವರಿಗೆ ಕ್ಷಮೆಯಾಚಿಸುವವರೆಗೂ ಪಾಕಿಸ್ತಾನ ಪಂದ್ಯಕ್ಕೆ ಹಾಜರಾಗಲಿಲ್ಲ.
Advertisement