
ದುಬೈ: ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಮೊಹಮ್ಮದ್ ನಬಿ ಒಂದೇ ಓವರ್ ನಲ್ಲಿ 5 ಸಿಕ್ಸರ್ ಸೇರಿದಂತೆ 22 ಎಸೆತಗಳಲ್ಲಿ 60 ರನ್ ಬಾರಿಸಿದ್ದರೂ ಅಪ್ಘಾನಿಸ್ತಾನ ಸೋತು ಟೂರ್ನಿಯಿಂದ ಹೊರಗೆ ಬಿದ್ದಿದೆ.
ಈ ಪಂದ್ಯದಲ್ಲಿ 40 ವರ್ಷದ ನಬಿ, ಲಂಕಾ ಬೌಲರ್ ಗಳನ್ನು ಬೆಂಡೆತ್ತಿದ್ದರು. ವಿಶೇಷವಾಗಿ ದುನಿತ್ ವೆಲ್ಲಲಾ ಅವರ ಒಂದೇ ಓವರ್ ನಲ್ಲಿ 5 ಸಿಕ್ಸರ್ ಬಾರಿಸಿದ್ದಾರೆ.
ಅಪ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಈ ಪಂದ್ಯದ ಇನ್ಸಿಂಗ್ಸ್ ಬ್ರೇಕ್ ವೇಳೆ ಬೌಲರ್ ದುನಿತ್ ವೆಲ್ಲಲಾ ಅವರ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಸುದ್ದಿಯನ್ನು ಕೆಲ ಪತ್ರಕರ್ತರು ನಬಿ ಅವರಿಗೆ ತಿಳಿಸಿದಾಗ ನಿಜಕ್ಕೂ ಶಾಕ್ ಆದರು.
ಪಂದ್ಯದ ವೇಳೆ ವೆಲ್ಲಲ್ಲಾ ಅವರಿಗೂ ಈ ಸುದ್ದಿ ತಿಳಿದಿರಲಿಲ್ಲ. ಪಂದ್ಯ ಮುಗಿಯುವವರೆಗೂ ಆ ಸುದ್ದಿ ಹೇಳದಿರಲು ಲಂಕಾ ತಂಡ ನಿರ್ಧರಿಸಿತ್ತು. ಪಂದ್ಯ ಮುಗಿಯುತ್ತಿದ್ದಂತೆಯೇ ಲಂಕಾ ಕೋಚ್ ಸನತ್ ಜಯಸೂರ್ಯ ವಲ್ಲಲಾ ಅವರಿಗೆ ತಂದೆಯ ನಿಧನ ಸುದ್ದಿ ತಿಳಿಸಿ ಸಾಂತ್ವನ ಹೇಳಿದ್ದಾರೆ. ಈ ಸುದ್ದಿ ಮೊಹಮ್ಮದ್ ನಬಿ ಅವರಿಗೆ ತಿಳಿದಾಗ ಶಾಕ್ ಆಗಿದ್ದಾರೆ. ಇನ್ಸಿಂಗ್ಸ್ ನ ಬ್ರೇಕ್ ಮಧ್ಯದಲ್ಲಿ ಹೃದಯಾಘಾತದಿಂದ ಅವರ ಸಾವನ್ನಪ್ಪಿರುವುದಾಗಿ ಪತ್ರಕರ್ತರೊಬ್ಬರು ನಬಿ ಅವರಿಗೆ ಹೇಳುವುದು ವಿಡಿಯೋದಲ್ಲಿದೆ.
ಈ ಆಘಾತದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಬಿ ಸಂತಾಪ ವ್ಯಕ್ತಪಡಿಸಿದ್ದಾರೆ. ದುನಿತ್ ವೆಲ್ಲಲಾ ಹಾಗೂ ಅವರ ಕುಟುಂಬಕ್ಕೆ ಹೃದಯಪೂರ್ವಕ ಸಂತಾಪಗಳು. Stay strong Brother ಎಂದು ಬರೆದುಕೊಂಡಿದ್ದಾರೆ.
Advertisement