
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಮತ್ತೆ ಬಗ್ಗು ಬಡಿದಿದ್ದು, ಸೂಪರ್ 4 ಹಂತದ ಪಂದ್ಯದಲ್ಲಿ 6 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿದೆ.
ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ ಸಾಹಿಬ್‌ಜಾದಾ ಫರ್ಹಾನ್ (58 ರನ್) ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 171ರನ್ ಪೇರಿಸಿ ಭಾರತಕ್ಕೆ ಗೆಲ್ಲಲು 172 ರನ್ ಗಳ ಸವಾಲಿನ ಗುರಿ ನೀಡಿತ್ತು.
ಪಾಕಿಸ್ತಾನ ನೀಡಿದ್ದ 172 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 18.5 ಓವರ್ ನಲ್ಲೇ ಕೇವಲ 4 ವಿಕೆಟ್ ಕಳೆದುಕೊಂಡು 174 ರನ್ ಪೇರಿಸಿ 6 ವಿಕೆಟ್ ಗಳ ಅಂತರದಲ್ಲಿ ಭರ್ಜರಿ ಜಯ ದಾಖಲಿಸಿತು. ಭಾರತದ ಪರ ಆರಂಭಿಕ ಆಟಗಾರರಾದ ಅಭಿಶೇಕ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಭರ್ಜರಿ ಆರಂಭ ಒದಗಿಸಿದರು.
ಮೊದಲ ವಿಕೆಟ್ ಗೆ ಈ ಜೋಡಿ 105ರನ್ ಪೇರಿಸಿ ಭಾರತದ ಗೆಲುವು ಸ್ಪಷ್ಟಪಡಿಸಿದ್ದರು. ಗಿಲ್ 28 ಎಸೆತಗಳಲ್ಲಿ 8 ಬೌಂಡರಿ ಸಹಿತ 47 ರನ್ ಸಿಡಿಸಿ ಕೇವಲ 3 ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು. ಅಂತೆಯೇ ಮತ್ತೊಂದು ಬದಿಯಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 74 ರನ್ ಸಿಡಿಸಿ ಅಬ್ರಾರ್ ಅಹ್ಮದ್ ಬೌಲಿಂಗ್ ನಲ್ಲಿ ಔಟಾದರು.
ನಾಯಕ ಸೂರ್ಯಕುಮಾರ್ ಗಿಲ್ ಕಳೆದ ಪಂದ್ಯದಲ್ಲಿ ಕೊನೆಯ ಕ್ರಮಾಂಕದಲ್ಲೂ ಬ್ಯಾಟಿಂಗ್ ಗೆ ಬಂದಿರಲಿಲ್ಲ. ಆದರೆ ಇಂದಿನ ಪಂದ್ಯದಲ್ಲಿ 2ನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಗೆ ಬಂದರಾದರೂ ಬಂದಷ್ಟೇ ವೇಗವಾಗಿ ಶೂನ್ಯಸುತ್ತಿ ಹ್ಯಾರಿಸ್ ರೌಫ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ತಿಲಕ್ ವರ್ಮಾ (ಅಜೇಯ 30), ಸಂಜು ಸ್ಯಾಮ್ಸನ್ (13 ರನ್) ಮತ್ತು ಹಾರ್ದಿಕ್ ಪಾಂಡ್ಯ (7) ಗೆಲುವಿನ ಔಪಚಾರಿಕತೆ ಮುಗಿಸಿದರು.
Advertisement