
ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಸೂಪರ್ 4 ಹಂತದ ಕೊನೆಯ ಪಂದ್ಯ ಸಾಕಷ್ಟು ರೋಚಕತೆಗೆ ಸಾಕ್ಷಿಯಾಯಿತು.
ಪಂದ್ಯ ಟೈ ಆದ್ದರಿಂದ ನಡೆದ ಸೂಪರ್ ಓವರ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿದ ಭಾರತ ಅಜೇಯವಾಗಿ ಫೈನಲ್ ಗೆ ಲಗ್ಗೆ ಹಾಕಿತು. ಭಾನುವಾರ ನಡೆಯಲಿರುವ ಫೈನಲ್ ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.
ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ್ದ ಶ್ರೀಲಂಕಾ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಗಳಿಸುವ ಮೂಲಕ ಪಂದ್ಯ ಟೈ ಆಯಿತು.
ಹೀಗಾಗಿ ವಿಜೇತರನ್ನು ನಿರ್ಧರಿಸಲು ನಡೆದ ಸೂಪರ್ ಓವರ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎರಡು ರನ್ ಗೆ ನಿಯಂತ್ರಿಸಿದ ಭಾರತ ಗೆಲುವು ದಾಖಲಿಸಿತು.
ಭಾರತದ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತು ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿ ತಲಾ ಅರ್ಧಶತಕ ಸಿಡಿಸಿ ಭಾರತದ ಬೃಹತ್ ಮೊತಕ್ಕೆ ಕಾರಣರಾದರು.
ಅಭಿಷೇಕ್ ಶರ್ಮಾ ಕೇವಲ 31 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 61 ರನ್ ಪೇರಿಸಿದರೆ, ಇತ್ತ ತಿಲಕ್ ವರ್ಮಾ ಕೂಡ 34 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ಅಜೇಯ 49 ರನ್ ಚಚ್ಚಿದರು. ಆ ಮೂಲಕ ಕೇವಲ 1 ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.
ಅತ್ತ ಲಂಕಾ ಪರ ನಿಸ್ಸಾಂಕಾ 58 ಎಸೆತಗಳಲ್ಲಿ ಆರು ಸಿಕ್ಸರ್ ಹಾಗೂ ಏಳು ಬೌಂಡರಿಗಳ ನೆರವಿನಿಂದ 107 ರನ್ ಗಳಿಸಿದರು. ಅವರಿಗೆ ಉತ್ತಮ ಸಾಥ್ ನೀಡಿದ ಕುಸಾಲ್ ಪರೇರಾ 58 ರನ್ ಗಳಿಸಿದರು.
Advertisement