
ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಇಂದಿನ ಪಂದ್ಯದಲ್ಲಿ ಶ್ರೀಲಂಕಾಗೆ ಗೆಲ್ಲಲು ಭಾರತ ತಂಡ 203 ರನ್ ಗಳ ಬೃಹತ್ ಗುರಿ ನೀಡಿದೆ.
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಪೇರಿಸಿತು.
ಭಾರತದ ಇನ್ನಿಂಗ್ಸ್ ನಲ್ಲಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತು ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಮಾಡಿ ತಲಾ ಅರ್ಧಶತಕ ಸಿಡಿಸಿ ಭಾರತದ ಬೃಹತ್ ಮೊತಕ್ಕೆ ಕಾರಣರಾದರು.
ಅಭಿಷೇಕ್ ಶರ್ಮಾ ಕೇವಲ 31 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 61 ರನ್ ಪೇರಿಸಿದರೆ, ಇತ್ತ ತಿಲಕ್ ವರ್ಮಾ ಕೂಡ 34 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ ಅಜೇಯ 49 ರನ್ ಚಚ್ಚಿದರು. ಆ ಮೂಲಕ ಕೇವಲ 1 ರನ್ ಅಂತರದಲ್ಲಿ ಅರ್ಧಶತಕ ಮಿಸ್ ಮಾಡಿಕೊಂಡರು.
ಮುಗ್ಗರಿಸಿದ ಗಿಲ್, ಸಂಜು ಸ್ಯಾಮ್ಸನ್ ಸಮಯೋಚಿತ ಬ್ಯಾಟಿಂಗ್
ಮತ್ತೊಂದೆಡೆ ಹಾಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೆ ಭಾರತದ ಆರಂಭಿಕ ಆಟಗಾರ ಶುಭ್ ಮನ್ ಗಿಲ್ ಮುಗ್ಗರಿಸಿದ್ದಾರೆ. ಗಿಲ್ ಕೇವಲ 3 ಎಸೆತ ಎದುರಿಸಿ 4 ರನ್ ಗಳಿಸಿ ತೀಕ್ಷಣಗೆ ವಿಕೆಟ್ ಒಪ್ಪಿಸಿದರು.
ಅಂತೆಯೇ ನಾಯಕ ಸೂರ್ಯ ಕುಮಾರ್ ಯಾದವ್ ಕೂಡ 13 ರನ್ ಗಳಿಸಿ ನಿರ್ಗಮಿಸಿದರೆ, ಹಾರ್ದಿಕ್ ಪಾಂಡ್ಯಾ 2 ರನ್ ಗಳಿಸಿ ಔಟಾದರು. ಈ ನಡುವೆ ದಿಢೀರ್ ಸತತ ವಿಕೆಟ್ ಪತನವಾದರೂ ದೃತಿಗೆಡದ ತಿಲಕ್ ವರ್ಮಾ ಸಂಜು ಸ್ಯಾಮ್ಸನ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ 4ನೇ ವಿಕೆಟ್ ಗೆ 66 ರನ್ ಕಲೆಹಾಕಿತು. ಈ ಪೈಕಿ ಸಂಜು ಸ್ಯಾಮ್ಸನ್ 39 ರನ್ ಕಲೆ ಹಾಕಿದರು.
ಅಂತಿಮ ಹಂತದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಅಕ್ಸರ್ ಪಟೇಲ್ ಕೂಡ ಕೇವಲ 15 ಎಸೆತಗಳಲ್ಲಿ 21 ರನ್ ಗಳಿಸಿದರು. ಭಾರತದ ಇನ್ನಿಂಗ್ಸ್ ನ ಅಂತಿಮ ಎಸೆತದಲ್ಲಿ ಸಿಕ್ಸರ್ ಭಾರಿಸಿ ಭಾರತ ಸ್ಕೋರ್ 200ರ ಗಡಿ ದಾಟುವಂತೆ ನೋಡಿಕೊಂಡರು. ಅಂತಿಮವಾಗಿ ಭಾರತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 202 ರನ್ ಕಲೆಹಾಕಿ ಶ್ರೀಲಂಕಾಗೆ ಗೆಲ್ಲಲು 203 ರನ್ ಗಳ ಬೃಹತ್ ಗುರಿ ನೀಡಿದೆ.
ಇನ್ನು ಶ್ರೀಲಂಕಾ ಪರ ತೀಕ್ಷಣ, ಚಮೀರಾ, ಹಸರಂಗ, ಶನಕ ಮತ್ತು ನಾಯಕ ಅಸಲಂಕಾ ತಲಾ ಒಂದೊಂದು ವಿಕೆಟ್ ಪಡೆದರು.
Advertisement