
ದುಬೈ: ಭಾರತದ ಆಪರೇಷನ್ ಸಿಂದೂರ್ ಮತ್ತು ರಫೇಲ್ ಯುದ್ಧ ವಿಮಾನ ಕುರಿತು ವ್ಯಂಗ್ಯ ಮಾಡಿದ್ದ ಪಾಕಿಸ್ತಾನ ಕ್ರಿಕೆಟಿಗ ಹ್ಯಾರಿಸ್ ರೌಫ್ (Haris Rauf)ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಶಿಕ್ಷೆ ನೀಡಿದೆ.
ಏಷ್ಯಾ ಕಪ್ (Asia Cup) ಸೂಪರ್ 4 ಪಂದ್ಯದಲ್ಲಿ ಪ್ರಚೋದನಕಾರಿ ಸನ್ನೆಗಳನ್ನು ಬಳಸಿದ ಆರೋಪದ ಮೇಲೆ ಪಾಕಿಸ್ತಾನಿ ಕ್ರಿಕೆಟಿಗರಾದ ಹ್ಯಾರಿಸ್ ರೌಫ್ (Haris Rauf) ಮತ್ತು ಸಾಹಿಬ್ಜಾದಾ ಫರ್ಹಾನ್ (Sahibzada Farhan) ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ.
ಸೆಪ್ಟೆಂಬರ್ 21 ರಂದು ಭಾರತ ವಿರುದ್ಧದ ಹೈ-ವೋಲ್ಟೇಜ್ ಏಷ್ಯಾ ಕಪ್ ಪಂದ್ಯದ ಸಮಯದಲ್ಲಿ "ಅಸಭ್ಯ ಮತ್ತು ಆಕ್ರಮಣಕಾರಿ ವರ್ತನೆ" ತೋರಿದ್ದಕ್ಕಾಗಿ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರಿಗೆ ಐಸಿಸಿ ಪಂದ್ಯ ಶುಲ್ಕದ ಶೇ. 30% ರಷ್ಟು ದಂಡ ವಿಧಿಸಿದೆ.
ಹ್ಯಾರಿಸ್ ರೌಫ್ ಭಾರತ ಬ್ಯಾಟಿಂಗ್ ವೇಳೆ ತಾವು ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುವಾಗ ಯುದ್ಧ ವಿಮಾನ ಪತನದ ಅಣಕ ಮಾಡಿದ್ದರು. ಅಲ್ಲದೆ 6-0 ಚಿನ್ಹೆ ತೋರಿಸಿ ಆರು ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಚಿನ್ಹೆ ಮಾಡಿ ತೋರಿಸುತ್ತಿದ್ದರು.
ಭಾರತೀಯ ಅಭಿಮಾನಿಗಳನ್ನು ಅಣಕಿಸುತ್ತಿರುವುದು ಕಂಡುಬಂದಿತ್ತು. ಇದು ಉಭಯ ತಂಡಗಳ ಅಭಿಮಾನಿಗಳ ನಡುವಿನ ಉದ್ವಿಗ್ನತೆ ಹೆಚ್ಚಿಸಿತ್ತು, ಇದೇ ಕಾರಣಕ್ಕೆ ಬಿಸಿಸಿಐ ದೂರು ಕೂಡ ನೀಡಿತ್ತು. ಇದು ಇತ್ತೀಚಿನ ಉಭಯ ದೇಶಗಳ ನಡುವಿನ ಮಿಲಿಟರಿ ಉದ್ವಿಗ್ನತೆಗೆ ಸ್ಪಷ್ಟ ಉಲ್ಲೇಖವಾಗಿದೆ ಎಂದು ಆರೋಪಿಸಿತ್ತು.
ಗನ್ ಫೈರ್ ಸಂಭ್ರಮ ಮಾಡಿದ್ದ ಬ್ಯಾಟರ್ ಗೂ ಶಾಕ್
ಅದೇ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟಿಂಗ್ ವೇಳೆ ಅರ್ಧಶತಕ ಸಿಡಿಸಿ ಗನ್ ಫೈರ್ ಸಂಭ್ರಮಾಚರಣೆ ಮಾಡಿದ್ದ ಪಾಕಿಸ್ತಾನ ಆರಂಭಿಕ ಆಟಗಾರ ಸಾಹಿಬ್ಜಾದಾ ಫರ್ಹಾನ್ ಗೂ ಐಸಿಸಿ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಎಚ್ಚರಿಕೆ ನೀಡಿದ್ದಾರೆ. ಇಬ್ಬರೂ ಆಟಗಾರರು ಪ್ರಚೋದನಕಾರಿ ಸನ್ನೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಬಿಸಿಸಿಐ ಐಸಿಸಿಗೆ ಸಲ್ಲಿಸಿದ ಅಧಿಕೃತ ದೂರಿನ ನಂತರ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.
ಆಟಗಾರರ ನಡುವೆ ವಾಕ್ಸಮರ
ಇನ್ನು ಪಾಕ್ ವೇಗಿ ಹ್ಯಾರಿಸ್ ರೌಫ್ ಕೇವಲ ಪ್ರಚೋದನಾತ್ಮಕ ಅಣಕ ಮಾತ್ರವಲ್ಲದೇ ಭಾರತೀಯ ಆರಂಭಿಕ ಆಟಗಾರರಾದ ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರೊಂದಿಗೆ ಮೈದಾನದಲ್ಲೇ ವಾಕ್ಸಮರ ಕೂಡ ನಡೆಸಿದ್ದರು.
ತಪ್ಪೊಪ್ಪಿಕೊಳ್ಳದ ಪಾಕಿಗಳು
ಮೂಲಗಳ ಪ್ರಕಾರ ಇಂದು ನಡೆದ ಪಂದ್ಯ ರೆಫರಿಯ ಮುಂದೆ ವಿಚಾರಣೆಯ ಸಮಯದಲ್ಲಿ ಪಾಕಿಸ್ತಾನದ ಇಬ್ಬರೂ ಆಟಗಾರರು ಆರಂಭದಲ್ಲಿ ತಪ್ಪೊಪ್ಪಿಕೊಂಡಿರಲಿಲ್ಲ. ಫರ್ಹಾನ್ ತಮ್ಮ ವಿವಾದಾತ್ಮಕ ಆಚರಣೆಯನ್ನು "ತನ್ನ ಜನಾಂಗೀಯ ಪಖ್ತೂನ್ ಬುಡಕಟ್ಟು ಜನಾಂಗದಲ್ಲಿ ಆಚರಿಸುವ ಸಾಂಪ್ರದಾಯಿಕ ವಿಧಾನ" ಎಂದು ಸಮರ್ಥಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಅವರಿಗೆ ಎಚ್ಚರಿಕೆ ಮಾತ್ರ ನೀಡಲಾಗಿದೆ ಎಂದು ವರದಿಯಾಗಿದೆ.
ಹ್ಯಾರಿಸ್ ರೌಫ್ ಮತ್ತು ಶಾಹಿಬ್ಜಾದಾ ಫರ್ಹಾನ್ ಅವರ ವರ್ತನೆಗಾಗಿ ಐಸಿಸಿ ನೀತಿ ಸಂಹಿತೆಯ ಅಡಿಯಲ್ಲಿ ಲೆವೆಲ್ 1 ಅಪರಾಧದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ರೌಫ್ ಅವರ ಪಂದ್ಯ ಶುಲ್ಕದ ಒಂದು ಭಾಗವನ್ನು ದಂಡ ವಿಧಿಸಲಾಗಿದೆ ಮತ್ತು ಫರ್ಹಾನ್ ಅವರಿಗೆ ವಾಗ್ದಂಡನೆ ವಿಧಿಸಲಾಗಿದೆ.
ಏಷ್ಯಾಕಪ್ ಪೈನಲ್ ಪಂದ್ಯದ ಬಿಸಿ ಏರಿಸಿದ ತೀರ್ಪು
ಇನ್ನು ಇಂದಿನ ಈ ತೀರ್ಪು ಇದೇ ಭಾನುವಾರ ನಡೆಯಲಿರುವ ಏಷ್ಯಾಕಪ್ 2025 ಫೈನಲ್ ಪಂದ್ಯದ ಬಿಸಿ ಏರಿಸಿದೆ. ಮೊದಲೇ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಭಾರತ ಮತ್ತು ಪಾಕಿಸ್ತಾನ ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ. ಅದರೊಂದಿಗೆ ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ತಂಡ ಏಷ್ಯಾಕಪ್ ಫೈನಲ್ ನಲ್ಲಿ ಭಾರತ ತಂಡವನ್ನು ಎದುರಿಸುತ್ತಿದೆ. ಇದರೊಟ್ಟಿಗೆ ಇದೀಗ ಐಸಿಸಿಯ ಈ ತೀರ್ಪು ಫೈನಲ್ ಪಂದ್ಯದ ರೋಚಕತೆಯನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಲಾಗಿದೆ.
Advertisement