

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಕೋಚ್ ಬ್ರಾಡ್ ಹ್ಯಾಡಿನ್, ಕಳೆದ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅವರಿಗೆ ಗಾಯವಾಗಿದ್ದು, ಸಿಎಸ್‌ಕೆ ವಿರುದ್ಧದ ಪಂದ್ಯದ ವೇಳೆಗೆ ಅವರು ಸಿದ್ಧರಾಗಿರುತ್ತಾರೆ ಎಂದಿದ್ದಾರೆ.
ಗುವಾಹಟಿಯಲ್ಲಿ ನಡೆದ ತಮ್ಮ ಆರಂಭಿಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ವಿರುದ್ಧ ಹೀನಾಯ ಸೋಲು ಅನುಭವಿಸಿದ ಸಿಎಸ್‌ಕೆ ತಂಡವನ್ನು ಎದುರಿಸುವ ಮೂಲಕ ಪಿಬಿಕೆಎಸ್ ಗೆಲುವಿನ ಮೊಮೆಂಟಮ್ ಅನ್ನು ಮುಂದುವರಿಸುವ ಗುರಿಯನ್ನು ಹೊಂದಿದೆ.
ನಾನ್-ಸ್ಟ್ರೈಕರ್‌ನ ತುದಿಯಲ್ಲಿ ಕೂಪರ್ ಕೊನೊಲಿ ಅವರು ಹೊಡೆದ ಶಾಟ್‌ನಿಂದ ಕೈಗೆ ಬಲವಾದ ಪೆಟ್ಟು ತಿಂದ ಅಯ್ಯರ್, ಸದ್ಯಕ್ಕೆ ಗಂಭೀರ ಗಾಯದಿಂದ ಬಳಲುತ್ತಿಲ್ಲ ಮತ್ತು CSK ವಿರುದ್ಧದ ಪಂದ್ಯದ ವೇಳೆಗೆ ಅವರು ಚೇತರಿಸಿಕೊಳ್ಳಬಹುದಾದ್ದರಿಂದ PBKSಗೆ ನಿಟ್ಟುಸಿರು ಬಿಟ್ಟಂತಾಗಿದೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ ಅವರ ಬಗ್ಗೆ ಅಪ್‌ಡೇಟ್ ನೀಡಿದ ಹ್ಯಾಡಿನ್, 'ಶ್ರೇಯಸ್ ಅಯ್ಯರ್ ಅವರಿಗೆ ಯಾವುದೇ ಮೂಳೆ ಮುರಿತ ಸಂಭವಿಸಿಲ್ಲ. ಅದು ಒಳ್ಳೆಯದು. ಈಗ ಊತವನ್ನು ಕಡಿಮೆ ಮಾಡುವುದು ಮತ್ತು ಕೈಗೆ ಚಲನೆಯನ್ನು ಮರಳಿ ತರುವುದು ಮಾತ್ರ ಉಳಿದಿದೆ. ಆದ್ದರಿಂದ, ಅವರು ನಾಳೆ ವೇಳೆಗೆ ಸರಿಯಾಗಿರುತ್ತಾರೆ' ಎಂದು ಹೇಳಿದರು.
ಕಳೆದ ಪಂದ್ಯದಲ್ಲಿ ಕೂಪರ್ ಕೊನೊಲಿ ಅವರ ಆಕರ್ಷಕ ಬ್ಯಾಟಿಂಗ್ ಅನ್ನು ಹ್ಯಾಡಿನ್ ಶ್ಲಾಘಿಸಿದರು. ಕೊನೊಲಿ 44 ಎಸೆತಗಳಲ್ಲಿ ಐದು ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳನ್ನು ಒಳಗೊಂಡಂತೆ ಅಜೇಯ 72 ರನ್ ಗಳಿಸಿದರು. ಗುಜರಾತ್ ಟೈಟಾನ್ಸ್ ನೀಡಿದ್ದ 163 ರನ್ ಗುರಿ ಬೆನ್ನತ್ತಿದ್ದ ಪಂಜಾಬ್ ಕಿಂಗ್ಸ್‌ನ ಕೂಪರ್ ಕೊನೊಲಿ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಅಜೇಯ 72 ರನ್‌ಗಳನ್ನು ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ಅಂತಿಮವಾಗಿ ಪಿಬಿಕೆಎಸ್‌ಗೆ ಮೂರು ವಿಕೆಟ್‌ಗಳ ಗೆಲುವು ಸಿಕ್ಕಿತು.
'ಆಸ್ಟ್ರೇಲಿಯಾದಲ್ಲಿ ಕೂಪರ್ ಕೊನೊಲಿಯ ಬಗ್ಗೆ ನಮಗೆ ಸ್ವಲ್ಪ ಸಮಯದಿಂದ ತಿಳಿದಿದೆ. ಹರಾಜಿನ ಆರಂಭದಲ್ಲಿಯೇ ಅವರನ್ನು ಕರೆತರಲು ನಾವು ಸಾಕಷ್ಟು ಉತ್ಸುಕರಾಗಿದ್ದೆವು ಮತ್ತು ಅವರನ್ನು ಕರೆತರುವ ಬಗ್ಗೆ ಆರಂಭದಲ್ಲಿಯೇ ನಾವು ಮಾತನಾಡಿದ್ದೆವು' ಎಂದು ಹೇಳಿದರು.
'ಎಲ್ಲರೂ ಬ್ಯಾಟಿಂಗ್‌ನಲ್ಲಿ ಅವರ ಪ್ರಬುದ್ಧತೆಯ ರುಚಿಯನ್ನು ಅನುಭವಿಸಿದ್ದಾರೆ ಮತ್ತು ಮೊದಲ ಪಂದ್ಯದಲ್ಲಿ ಅವರು ಇನಿಂಗ್ಸ್ ಅನ್ನು ನಿಯಂತ್ರಿಸಿದ ರೀತಿಯನ್ನು ನೋಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಇದು ಅವರ ಮೊದಲ ಐಪಿಎಲ್ ಪಂದ್ಯವಾಗಿತ್ತು. ಆದರೆ, ಅವರ ಒತ್ತಡ ನಿಯಂತ್ರಿಸುವ ಸಾಮರ್ಥ್ಯದ ಬಗ್ಗೆ ನಮಗೆ ಬಹಳ ಸಮಯದಿಂದ ತಿಳಿದಿದೆ ಮತ್ತು ಅವರ ಕೌಶಲ್ಯಗಳನ್ನು ನೋಡುವ ಅವಕಾಶ ಎಲ್ಲರಿಗೂ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ' ಎಂದರು.
Advertisement