T20 World Cup 2026: ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ಇಲ್ಲದಿರುವುದು 'ದುರದೃಷ್ಟಕರ' ಎಂದ ಪಾಕ್ ನಾಯಕ ಸಲ್ಮಾನ್ ಅಲಿ ಅಘಾ
ಗುರುವಾರ ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ 2026ರ ನಾಯಕರ ದಿನದ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಐಸಿಸಿ-ಬಾಂಗ್ಲಾದೇಶ ವಿವಾದವನ್ನು ಮತ್ತೆ ಕೆದಕಿದ್ದಾರೆ. ಬಾಂಗ್ಲಾದೇಶ ತಂಡವು ತಮ್ಮ ಗುಂಪು ಹಂತದ ಪಂದ್ಯಗಳಿಗಾಗಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ಪಂದ್ಯಾವಳಿಯಿಂದಲೇ ದೂರ ಉಳಿಯಿತು. ಆಟಗಾರರ 'ಭದ್ರತೆ' ಉಲ್ಲೇಖಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ತಮ್ಮ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸುವಂತೆ ವಿನಂತಿಸಿತು. ಆದರೆ, ಐಸಿಸಿ ಅದಕ್ಕೆ ಒಪ್ಪಲಿಲ್ಲ. ಬಾಂಗ್ಲಾದೇಶ ನಿರ್ಗಮನದ ನಂತರ, ಪಾಕಿಸ್ತಾನವು ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿ ಘೋಷಿಸಿತು ಆದರೆ, ಫೆಬ್ರುವರಿ 15 ರಂದು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿತು.
ಪತ್ರಿಕಾಗೋಷ್ಠಿಯಲ್ಲಿ ಬಾಂಗ್ಲಾದೇಶದ ನಿರ್ಗಮನದ ಬಗ್ಗೆ ಅಘಾ ಅವರನ್ನು ಕೇಳಿದಾಗ, ಬಾಂಗ್ಲಾದೇಶ ಇನ್ನು ಮುಂದೆ ಪಂದ್ಯಾವಳಿಯಲ್ಲಿ ಇಲ್ಲದಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.
'ಬಾಂಗ್ಲಾದೇಶಿಗಳು ನಮ್ಮ ಸಹೋದರರು; ಪಾಕಿಸ್ತಾನಕ್ಕೆ ಅವರು ನೀಡಿದ ಬೆಂಬಲಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಅವರು ಪಂದ್ಯಾವಳಿಯಲ್ಲಿ ಆಡದಿರುವುದು ವಿಷಾದಕರ' ಎಂದು ಸಲ್ಮಾನ್ ಅಲಿ ಅಘಾ ಹೇಳಿದ್ದಾರೆ ಎಂದು ರೆವ್‌ಸ್ಪೋರ್ಟ್ಜ್ ಉಲ್ಲೇಖಿಸಿದೆ.
'ಭಾರತ ವಿರುದ್ಧದ ಪಂದ್ಯ ನಮ್ಮ ನಿಯಂತ್ರಣದಲ್ಲಿಲ್ಲ. ಅದು ಸರ್ಕಾರ ಮತ್ತು ಪಿಸಿಬಿಯ ನಿರ್ಧಾರ ಮತ್ತು ನಾವು ಅದನ್ನು ಗೌರವಿಸುತ್ತೇವೆ. ಅವರು ಏನು ಹೇಳುತ್ತಾರೋ ಅದನ್ನು ನಾವು ಮಾಡುತ್ತೇವೆ. ನಾವು ಮತ್ತೆ ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಆಡಬೇಕಾದಗಲೂ, ನಾವು ಮತ್ತೆ ಅವರ ಸಲಹೆಯಂತೆಯೇ ಕಾರ್ಯನಿರ್ವಹಿಸಬೇಕಾಗುತ್ತದೆ' ಎಂದು ಹೇಳಿದರು.
'ಹೌದು, ನಾವು ಕಳೆದ ವಿಶ್ವಕಪ್‌ನಲ್ಲಿ USA ವಿರುದ್ಧ ಸೋತಿದ್ದೇವೆ. ಆದರೆ, ಅದು ಈಗ ಇತಿಹಾಸ. ಇದು ಹೊಸ ವಿಶ್ವಕಪ್, ಹೊಸ ತಂಡ ಮತ್ತು ಹೊಸ ಸಂಯೋಜನೆ ಮತ್ತು ನಾವು ಅದರ ಬಗ್ಗೆ ತುಂಬಾ ಉತ್ಸುಕರಾಗಿದ್ದೇವೆ. ಇದು ನಾಯಕನಾಗಿ ನನ್ನ ಮೊದಲ ವಿಶ್ವಕಪ್ ಮತ್ತು ನಾನು ಅದರ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ. ನಾಯಕನಾಗಿ ನನ್ನನ್ನು ಹೇಗೆ ವಿವರಿಸಬೇಕೆಂದು ನನಗೆ ತಿಳಿದಿಲ್ಲ' ಎಂದರು.
ನಾಯಕನಾಗಿ, ನಾನು ತಂಡವನ್ನು ಮುನ್ನಡೆಸಲು ಮತ್ತು ತಂಡಕ್ಕಾಗಿ ಸಾಧ್ಯವಾದಷ್ಟು ಕೆಲಸ ಮಾಡಲು, ತಂಡದಿಂದ ಅತ್ಯುತ್ತಮವಾದದ್ದನ್ನು ಪಡೆಯಲು ಮತ್ತು ಅವರು ತಮ್ಮ ಅತ್ಯುತ್ತಮ ಆಟವಾಡಲು ವಾತಾವರಣವನ್ನು ಸಿದ್ಧಪಡಿಸಲು ಬಯಸುತ್ತೇನೆ ಎಂದು ಆಘಾ ಹೇಳಿದರು.
ಈಮಧ್ಯೆ, ಬಾಂಗ್ಲಾದೇಶದ ಯುವ ಮತ್ತು ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಅವರು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಗುರುವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಬಾಂಗ್ಲಾದೇಶವನ್ನು ಬಹುರಾಷ್ಟ್ರೀಯ ಕಾರ್ಯಕ್ರಮದಿಂದ ತೆಗೆದುಹಾಕಿದ್ದಕ್ಕೆ ಪ್ರತಿಭಟಿಸಲು ಷರೀಫ್ ಅವರ ನಿರ್ಧಾರವನ್ನು ಒಪ್ಪಿಕೊಂಡಿದ್ದು, 'ಧನ್ಯವಾದಗಳು, ಪಾಕಿಸ್ತಾನ' ಎಂದು ಬರೆದಿದ್ದಾರೆ.
'ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶವನ್ನು ಹೊರಗಿಟ್ಟಿದ್ದನ್ನು ಪ್ರತಿಭಟಿಸಿ ತಮ್ಮ ದೇಶ ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ನಿರ್ಧರಿಸಿದೆ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ನಾವು ಭಾರತದ ವಿರುದ್ಧ ಪಂದ್ಯವನ್ನು ಆಡುವುದಿಲ್ಲ ಎಂದು ಅವರು ಬುಧವಾರ ಸಂಪುಟ ಸದಸ್ಯರನ್ನು ಉದ್ದೇಶಿಸಿ ಹೇಳಿದರು. ಏಕೆಂದರೆ ಆಟದ ಮೈದಾನದಲ್ಲಿ ಯಾವುದೇ ರಾಜಕೀಯ ಇರಬಾರದು. ನಾವು ಈ ನಿರ್ಧಾರವನ್ನು ಬಹಳ ಚಿಂತನಶೀಲವಾಗಿ ತೆಗೆದುಕೊಂಡಿದ್ದೇವೆ. ನಾವು ಬಾಂಗ್ಲಾದೇಶದ ಪರವಾಗಿ ಸಂಪೂರ್ಣವಾಗಿ ನಿಲ್ಲಬೇಕು. ಇದು ತುಂಬಾ ಸೂಕ್ತವಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ' ಎಂದು ಅವರು ಹೇಳಿದರು.

