

ನವದೆಹಲಿ: ಇದೇ 15 ರಂದು ನಿಗದಿಯಾಗಿರುವ ಭಾರತ ವಿರುದ್ಧದ ಟಿ-20 ವಿಶ್ವಕಪ್ ಗುಂಪು ಹಂತದ ಪಂದ್ಯವನ್ನು ಬಹಿಷ್ಕರಿಸದಿರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮುಂದೆ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಲಾಹೋರ್‌ನಲ್ಲಿ ನಡೆದ ಐಸಿಸಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಬಾಂಗ್ಲಾದೇಶಕ್ಕೆ ಪರಿಹಾರವನ್ನು ಹೆಚ್ಚಿಸಬೇಕು. ಟಿ-20 ವಿಶ್ವಕಪ್ ನಿಂದ ಹೊರಹಾಕಿದರೂ ಭಾಗವಹಿಸುವ ಶುಲ್ಕವನ್ನು ಹೆಚ್ಚಿಸಬೇಕು. ಭವಿಷ್ಯದ ಐಸಿಸಿ ಟೂರ್ನಿಗಳ ಅತಿಥ್ಯದ ಹಕ್ಕುಗಳನ್ನು ನೀಡಬೇಕು ಎಂಬ ಬೇಡಿಕೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಟ್ಟಿರುವುದಾಗಿ ತಿಳಿದುಬಂದಿದೆ.
ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತದ ವಿರುದ್ಧದ ಪಂದ್ಯವನ್ನು ಆಡಲು ಕೆಲವು ಪಿಸಿಬಿ ಅಧಿಕಾರಿಗಳು ಮುಕ್ತವಾಗಿದ್ದರೆ, ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ವಿಷಯದಲ್ಲಿ ಅಸಹಕಾರ ಹೊಂದಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.
ನಖ್ವಿ ಇಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಲಿದ್ದು, ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದು ವೇಳೆ ಪಾಕಿಸ್ತಾನ, ಭಾರತದ ವಿರುದ್ಧದ ಪಂದ್ಯ ಬಹಿಷ್ಕರಿಸುವ ನಿರ್ಧಾರ ತೆಗೆದುಕೊಂಡರೆ ಭಾರಿ ದಂಡ, ಪಾಯಿಂಟ್ ಕಡಿತ, ಸಂಭಾವ್ಯ ಸದಸ್ಯತ್ಯ ಅಮಾನತು, ಮುಂಬರುವ ಅಂತಾರಾಷ್ಟ್ರೀಯ ಟೂರ್ನಿಗಳ ಅತಿಥ್ಯದ ಹಕ್ಕು ಕಡಿತ ಸೇರಿದಂತೆ ಅನೇಕ ನಿರ್ಬಂಧಗಳನ್ನು ಎದುರಿಸಬೇಕಾದ ಎಚ್ಚರಿಕೆಯನ್ನು ಐಸಿಸಿ ಈಗಾಗಲೇ ಪತ್ರದ ಮೂಲಕ ನೀಡಿದೆ ಎನ್ನಲಾಗಿದೆ.
ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಈಗಾಗಲೇ T20 ವಿಶ್ವಕಪ್ ಅಭಿಯಾನವನ್ನು ಆರಂಭಿಸಿವೆ. ಕೊಲಂಬೊದಲ್ಲಿ ನಡೆದ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನ ಮೂರು ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಭೀತಿಯಿಂದ ಹೊರಬಂದಿತು. ಮತ್ತೊಂದೆಡೆ, ಹಿಂದಿನ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿದ್ದ ಅಮೆರಿಕದ ವಿರುದ್ಧ ಭಾರತ ಗೆಲುವು ಸಾಧಿಸಿದೆ.
Advertisement