ಉತ್ತರಾಖಂಡದ ವೇಗದ ಬೌಲರ್ ರಾಜನ್ ಕುಮಾರ್ ನಿಷೇಧಿತ ಪದಾರ್ಥಗಳನ್ನು ಸೇವಿಸಿರುವುದು ದೃಢಪಟ್ಟಿದ್ದು, ಇದೀಗ ಭಾರತೀಯ ದೇಶೀಯ ಕ್ರಿಕೆಟ್ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ, ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ (NADA) ಪ್ರಕರಣದ ತನಿಖೆ ಪೂರ್ಣಗೊಳ್ಳುವವರೆಗೆ 29 ವರ್ಷದ ಆಟಗಾರನ ಮೇಲೆ ತಾತ್ಕಾಲಿಕ ಅಮಾನತು ವಿಧಿಸಿದೆ.
ಸುದ್ದಿಸಂಸ್ಥೆ ಪಿಟಿಐ ವರದಿ ಪ್ರಕಾರ, ರಾಜನ್ ಕುಮಾರ್ ಅವರ ಮಾದರಿಯಲ್ಲಿ ಮೂರು ನಿಷೇಧಿತ ಪದಾರ್ಥಗಳಾದ ಡ್ರೊಸ್ಟಾನೊಲೋನ್, ಮೆಟೆನೊಲೋನ್ (ಸ್ನಾಯು ಬೆಳವಣಿಗೆ ಮತ್ತು ಕಾರ್ಯಕ್ಷಮತೆ ವರ್ಧನೆಗೆ ಬಳಸುವ ಅನಾಬೊಲಿಕ್ ಸ್ಟೀರಾಯ್ಡ್‌ಗಳು) ಮತ್ತು ಟೆಸ್ಟೋಸ್ಟೆರಾನ್ ಮಟ್ಟವನ್ನು ಪುನಃಸ್ಥಾಪಿಸಲು ಪುರುಷ ಕ್ರೀಡಾಪಟುಗಳು ಹೆಚ್ಚಾಗಿ ದುರುಪಯೋಗಪಡಿಸಿಕೊಳ್ಳುವ ಫರ್ಟಿಲಿಟಿ ಔಷಧವಾದ ಕ್ಲೋಮಿಫೆನ್ ಪತ್ತೆಯಾಗಿದೆ. ಫಲಿತಾಂಶಗಳು ದೃಢಪಟ್ಟ ನಂತರ ಪ್ರಮಾಣಿತ ಡೋಪಿಂಗ್ ವಿರೋಧಿ ಪ್ರೋಟೋಕಾಲ್ ಅಡಿಯಲ್ಲಿ NADA ತಕ್ಷಣವೇ ಕ್ರಮಕೈಗೊಂಡಿದೆ.
ಕುಮಾರ್ ಕೊನೆಯ ಬಾರಿಗೆ ಡಿಸೆಂಬರ್ 8 ರಂದು ಅಹಮದಾಬಾದ್‌ನಲ್ಲಿ ದೆಹಲಿ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ನಲ್ಲಿ ಉತ್ತರಾಖಂಡ್ ಪರ ಆಡಿದ್ದರು. ಅವರು ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲ ಮತ್ತು ಅವರು ತಮ್ಮ ಬಿ ಮಾದರಿಯನ್ನು ಪರೀಕ್ಷಿಸಲು ವಿನಂತಿಸುತ್ತಾರೆಯೇ ಅಥವಾ ಫಲಿತಾಂಶಗಳನ್ನು ಪ್ರಶ್ನಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದ ಬೌಲರ್‌ಗೆ ಈ ಬೆಳವಣಿಗೆ ದೊಡ್ಡ ಹಿನ್ನಡೆಯಾಗಿದೆ. ಕುಮಾರ್ 2025ರ SMAT ನಲ್ಲಿ ಉತ್ತರಾಖಂಡದ ಪರ ಪ್ರಮುಖ ವಿಕೆಟ್ ಪಡೆದವರಾಗಿದ್ದು, ಏಳು ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರಲ್ಲಿ ನಾಲ್ಕು ವಿಕೆಟ್ ಗೊಂಚಲು ಸಹ ಸೇರಿದೆ.
ಹರಿದ್ವಾರದಲ್ಲಿ ಜನಿಸಿದ ವೇಗಿಯ ದೇಶೀಯ ಕ್ರಿಕೆಟ್ ಸಾಧನೆ
ಟಿ20: 26 ಪಂದ್ಯಗಳಲ್ಲಿ 32 ವಿಕೆಟ್‌ಗಳು (ಸರಾಸರಿ 21.31)
ಲಿಸ್ಟ್ ಎ: 9 ಪಂದ್ಯಗಳಲ್ಲಿ 14 ವಿಕೆಟ್‌ಗಳು (ಅತ್ಯುತ್ತಮ 5/28)
ಪ್ರಥಮ ದರ್ಜೆ: 4 ಪಂದ್ಯಗಳಲ್ಲಿ 8 ವಿಕೆಟ್‌ಗಳು
ಕುಮಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಭಾಗವಾಗಿದ್ದರು. IPL 2023ನೇ ಆವೃತ್ತಿಯ ಹರಾಜಿನಲ್ಲಿ 70 ಲಕ್ಷ ರೂ.ಗೆ ಆಯ್ಕೆಯಾಗಿದ್ದರು ಮತ್ತು 2024ರಲ್ಲಿ ತಂಡದಲ್ಲಿ ಉಳಿಸಿಕೊಳ್ಳಲಾಗಿತ್ತು. ಆದರೂ, ಅವರಿನ್ನೂ IPL ಗೆ ಪದಾರ್ಪಣೆ ಮಾಡಿಲ್ಲ.
ಭಾರತೀಯ ಕ್ರಿಕೆಟ್‌ನಲ್ಲಿ ಡೋಪಿಂಗ್ ಪ್ರಕರಣಗಳು ಅಪರೂಪ. ಕೊನೆಯ ಪ್ರಮುಖ ಘಟನೆ 2019ರಲ್ಲಿ ಪೃಥ್ವಿ ಶಾ ಅವರದ್ದಾಗಿತ್ತು. ಅವರು ಟೆರ್ಬುಟಲಿನ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ನಂತರ ಎಂಟು ತಿಂಗಳ ನಿಷೇಧಕ್ಕೊಳಲಾಗಿದ್ದರು. ಇದು ಕೆಮ್ಮಿನ ಸಿರಪ್ ಮೂಲಕ ತಮ್ಮ ದೇಹ ಪ್ರವೇಶಿಸಿದೆ ಎಂದು ಹೇಳಿದ್ದರು. 2020ರಲ್ಲಿ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾದ ನಂತರ ಅನ್ಶುಲಾ ರಾವ್ ಅವರನ್ನು ಅಮಾನತುಗೊಳಿಸಲಾಯಿತು.
Advertisement