

ಭಾರತದಲ್ಲಿ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್‌ಗೆ ಸಂಬಂಧಿಸಿದಂತೆ ಆಟಗಾರರ ಭದ್ರತಾ ಕಾಳಜಿಗಳ ಕುರಿತು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಜೊತೆಗಿನ ಸಂಭಾಷಣೆಯ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಬುಧವಾರ ಮೌನ ಮುರಿದಿದೆ. ಪಂದ್ಯಾವಳಿಯಲ್ಲಿ ತಂಡದ ಭಾಗವಹಿಸುವಿಕೆಗೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸಲು ಐಸಿಸಿಯು ಬಿಸಿಬಿಯೊಂದಿಗೆ 'ನಿಕಟವಾಗಿ ಕೆಲಸ ಮಾಡಲು ಇಚ್ಛೆ ವ್ಯಕ್ತಪಡಿಸಿದೆ' ಎಂದು ಹೇಳಿದೆ.
ಬಿಸಿಸಿಐ ಸೂಚನೆಯ ಮೇರೆಗೆ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್‌ನಿಂದ ಹೊರಹಾಕಿದ ನಂತರ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪರಿಸ್ಥಿತಿ ಅಷ್ಟೇನು ಉತ್ತಮವಾಗಿಲ್ಲ. ಇದರಿಂದ ಕೋಪಗೊಂಡ ಬಿಸಿಬಿ ಭಾರತದಲ್ಲಿ ನಡೆಯಲಿರುವ ತಮ್ಮ ಪಾಲಿನ ನಾಲ್ಕು ವಿಶ್ವಕಪ್ ಪಂದ್ಯಗಳನ್ನು ಸಹ-ಆತಿಥೇಯ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ಐಸಿಸಿಗೆ ಲಿಖಿತ ಅರ್ಜಿಯಲ್ಲಿ ಒತ್ತಾಯಿಸಿದೆ.
'ಐಸಿಸಿ ಟಿ20 ವಿಶ್ವಕಪ್‌ಗಾಗಿ ಭಾರತದಲ್ಲಿ ನಡೆಯಲಿರುವ ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡದ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಮಂಡಳಿಯು ವ್ಯಕ್ತಪಡಿಸಿದ ಕಳವಳಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಐಸಿಸಿಯಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಿದೆ. ಇದರಲ್ಲಿ ತಂಡದ ಪಂದ್ಯಗಳನ್ನು ಸ್ಥಳಾಂತರಿಸುವ ವಿನಂತಿಯೂ ಸೇರಿದೆ' ಎಂದು ಬಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಐಸಿಸಿ ತನ್ನ ಸಂವಹನದಲ್ಲಿ, 'ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ತಂಡದ ಸಂಪೂರ್ಣ ಮತ್ತು ಅಡೆತಡೆಯಿಲ್ಲದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಬದ್ಧತೆಯನ್ನು ಪುನರುಚ್ಚರಿಸಿದೆ. ಮಂಡಳಿ ಎತ್ತಿದ ಕಳವಳಗಳನ್ನು ಪರಿಹರಿಸಲು ಬಿಸಿಬಿಯೊಂದಿಗೆ ನಿಕಟವಾಗಿ ಕೆಲಸ ಮಾಡುವ ಇಚ್ಛೆಯನ್ನು ಐಸಿಸಿ ವ್ಯಕ್ತಪಡಿಸಿದೆ ಮತ್ತು ಮಂಡಳಿಯ ಸಲಹೆಗಳನ್ನು ಸ್ವಾಗತಿಸಲಾಗುವುದು ಮತ್ತು ಪಂದ್ಯಾವಳಿಯ ವಿವರವಾದ ಭದ್ರತಾ ಯೋಜನೆಯ ಭಾಗವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದೆ' ಎಂದು ಅದು ಹೇಳಿದೆ.
ಈ ವಿಷಯದ ಬಗ್ಗೆ ಐಸಿಸಿ ಬಿಸಿಬಿಗೆ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ.
ಟಿ20 ವಿಶ್ವಕಪ್ ಫೆಬ್ರುವರಿ 7 ರಂದು ಆರಂಭವಾಗಲಿದ್ದು, ಬಾಂಗ್ಲಾದೇಶ ತಮ್ಮ ನಾಲ್ಕು ಪಂದ್ಯಗಳನ್ನು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಆಡಲಿದೆ.
Advertisement