

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇಲೆ ತನ್ನ ನಿರ್ಧಾರಗಳನ್ನು ಜಾರಿಗೊಳಿಸಲು ವಿಫಲವಾದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿರುದ್ಧ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಯೀದ್ ಅಜ್ಮಲ್ ವಾಗ್ದಾಳಿ ನಡೆಸಿದ್ದಾರೆ. ಬಿಸಿಸಿಐನ ಮಾಜಿ ಕಾರ್ಯದರ್ಶಿ ಜಯ್ ಶಾ ಇದೀಗ ಜಾಗತಿಕ ಸಂಸ್ಥೆಯ ವ್ಯವಹಾರಗಳ ಚುಕ್ಕಾಣಿ ಹಿಡಿದಿದ್ದು, ಅವರು ಹೇಳಿಕೆ ನೀಡಿದ್ದಾರೆ. ವಿಶ್ವ ಕ್ರಿಕೆಟ್‌ನ ಒಟ್ಟಾರೆ ಹಿತಾಸಕ್ತಿಗಾಗಿ ಪಕ್ಷಪಾತವಿಲ್ಲದ ಮತ್ತು ತತ್ವಬದ್ಧ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಐಸಿಸಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಎಂದು ಅಜ್ಮಾನ್ ಹೇಳಿದ್ದಾರೆ.
ಸುದ್ದಿಸಂಸ್ಥೆ ಪಿಟಿಐ ಪ್ರಕಾರ, ಬಿಸಿಸಿಐ ಮೇಲೆ ತನ್ನ ನಿರ್ಧಾರಗಳನ್ನು ಜಾರಿಗೊಳಿಸಲು ಮತ್ತು ಅದರ ಪ್ರಭಾವವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗದಿದ್ದರೆ ಐಸಿಸಿ ಇರುವುದೇ ಅನಗತ್ಯ ಎಂದು ಅಜ್ಮಲ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಅವರು ಮಾಧ್ಯಮಗಳಿಗೆ ಈ ಹೇಳಿಕೆ ನೀಡಿದ್ದಾರೆ. ಟೆಸ್ಟ್ ಆಡುವ ಎಲ್ಲ ರಾಷ್ಟ್ರಗಳು ಇದೇ ರೀತಿಯ ಭಾವನೆಯನ್ನು ಹಂಚಿಕೊಂಡಿವೆ. ಆದರೆ, ತಮ್ಮ ನಿಲುವಿನ ಬಗ್ಗೆ ಸಾರ್ವಜನಿಕವಾಗಿ ಹೇಳುವುದಿಲ್ಲ. ಭಾರತ ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸುವುದರ ಹಿಂದೆಯೂ ಯಾವುದೇ ತರ್ಕವಿಲ್ಲ. ಸದ್ಯ ಭಾರತೀಯರೇ ಐಸಿಸಿಯಲ್ಲಿ ಪ್ರಾಬಲ್ಯ ಹೊಂದಿರುವುದರಿಂದ ಜಾಗತಿಕ ಸಂಸ್ಥೆಯು ಯಾವುದೇ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಅಜ್ಮಲ್ ಹೇಳಿದ್ದಾರೆ.
'ಐಸಿಸಿ ತನ್ನ ನಿರ್ಧಾರಗಳನ್ನು ಭಾರತೀಯ ಮಂಡಳಿಯ ಮೇಲೆ ಜಾರಿಗೊಳಿಸಲು ಸಾಧ್ಯವಾಗದಿದ್ದರೆ ಅದರ ಅಸ್ತಿತ್ವವೇ ಅನಗತ್ಯ. ಭಾರತ ಪಾಕಿಸ್ತಾನದಲ್ಲಿ ಆಡದಿರಲು ಯಾವುದೇ ತಾರ್ಕಿಕ ಕಾರಣವಿಲ್ಲ. ಆದರೆ, ಐಸಿಸಿ ಈಗ ಭಾರತೀಯರಿಂದ ಆಳಲ್ಪಡುತ್ತಿದ್ದು, ಅಸಹಾಯಕವಾಗಿದೆ' ಎಂದು ಅಜ್ಮಲ್ ಹೇಳಿದ್ದಾರೆ.
ಎರಡೂ ದೇಶಗಳ ನಡುವಿನ ಉದ್ವಿಗ್ನತೆಯಿಂದಾಗಿ ಭಾರತವು ಯಾವುದೇ ಐಸಿಸಿ ಕಾರ್ಯಕ್ರಮಕ್ಕಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಸ್ಪಷ್ಟವಾಗಿ ನಿರಾಕರಿಸಿದೆ. ಮೆನ್ ಇನ್ ಬ್ಲೂ ತಂಡವು ಕಳೆದ ವರ್ಷ ದುಬೈನ ತಟಸ್ಥ ಸ್ಥಳದಲ್ಲಿ ತಮ್ಮ ಚಾಂಪಿಯನ್ಸ್ ಟ್ರೋಫಿ 2025 ಪಂದ್ಯಗಳನ್ನು ಆಡಿತು. ಆದರೆ, ಪಿಸಿಬಿ ಮತ್ತು ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ 2025 ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತು. ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನವು 2025ರಲ್ಲಿ ಮಹಿಳಾ ವಿಶ್ವಕಪ್‌ಗಾಗಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿತು. ಹೆಚ್ಚುವರಿಯಾಗಿ, ದೇಶವು ತನ್ನ ಎಲ್ಲ ಟಿ20 ವಿಶ್ವಕಪ್ 2026 ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
Advertisement