

ರಾಜ್‌ಕೋಟ್: 2ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಮೂರು ಪಂದ್ಯಗಳ ಏಕದಿನ ಟೂರ್ನಿಯಲ್ಲಿ ಉಭಯ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು ಇಂದೋರ್ ನಲ್ಲಿ ನಡೆಯಲಿರುವ ಮೂರನೇ ಪಂದ್ಯ ಮಹತ್ವದ್ದಾಗಿದೆ. ಆ ಪಂದ್ಯಗಲ್ಲಿ ಗೆಲುವು ಸಾಧಿಸಿದ ತಂಡ ಸರಣಿ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆ.
ರಾಜ್ ಕೋಟ್ ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿತು. ಆ ಮೂಲಕ ನ್ಯೂಜಿಲೆಂಡ್ ಗೆ ಗೆಲ್ಲಲು 285 ರನ್ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್ ಪರ ಡ್ಯಾರಿಲ್ ಮಿಚೆಲ್ ಅಜೇಯ 131 ರನ್ ಬಾರಿಸಿದ್ದು ತಂಡವನ್ನು ಗೆಲುವಿನ ದಡ ಸೇರಿದರು. ನ್ಯೂಜಿಲ್ಯಾಂಡ್ 3 ವಿಕೆಟ್ ನಷ್ಟಕ್ಕೆ 286 ಬಾರಿಸಿತು. ಕಿವೀಸ್ ಪರ ವಿಲ್ ಯಂಗ್ 87 ಮತ್ತು ಗ್ಲೇನ್ ಪಿಲಿಪ್ಸ್ ಅಜೇಯ 32 ರನ್ ಗಳಿಸಿದ್ದಾರೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭವೇ ದೊರೆತಿತ್ತು. ಇನ್ನಿಂಗ್ಸ್ ಆರಂಭಿಸಿದ ನಾಯಕ ಶುಭ್ ಮನ್ ಗಿಲ್ ಮತ್ತು ರೋಹಿತ್ ಶರ್ಮಾ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದರೂ ಬಳಿಕ ಕಿವೀಸ್ ಬೌಲರ್ ಗಳ ಮೇಲೆ ಸವಾರಿ ಮಾಡಿದರು. ಮೊದಲ ವಿಕೆಟ್ ಗೆ ಈ ಜೋಡಿ 70ರನ್ ಪೇರಿಸಿತು. ಈ ಹಂತದಲ್ಲಿ 24 ರನ್ ಗಳಿಸಿದ್ದ ರೋಹಿತ್ ಶರ್ಮಾ ಕ್ಲಾರ್ಕೆ ಬೌಲಿಂಗ್ ನಲ್ಲಿ ಅನಗತ್ಯ ಹೊಡೆತಕ್ಕೆ ಮುಂದಾಗಿ ವಿಲ್ ಯಂಗ್ ಗೆ ಕ್ಯಾಚ್ ನೀಡಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ವಿರಾಟ್ ಕೊಹ್ಲಿ ಇಂದೂ ಕೂಡ ಉತ್ತಮ ಬ್ಯಾಟಿಂಗ್ ನಡೆಸುವ ಮುನ್ಸೂಚನೆ ನೀಡಿದರು.
ಗಿಲ್ ಜೊತೆಗೂಡಿ 3ನೇ ವಿಕೆಟ್ ಗೆ 29 ರನ್ ಕಲೆಹಾಕಿದರು. ಈ ಹಂತದಲ್ಲಿ ಅರ್ಧಶತಕ ಗಳಿಸಿದ್ದ ಗಿಲ್ (56 ರನ್) ಜೇಮಿಸನ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ಶ್ರೇಯಸ್ ಅಯ್ಯರ್ 8 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು. ದೊಡ್ಡ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದ್ದ ಕೊಹ್ಲಿ ಕೂಡ ಕೇವಲ 23 ರನ್ ಗಳಿಸಿ ಔಟಾಗಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು. 29 ಎಸೆತಗಳಲ್ಲಿ 2 ಬೌಂಡರಿ ಸಹಿತ 23 ರನ್ ಗಳಿಸಿ ಮತ್ತೆ ಕ್ಲಾರ್ಕೆ ಬೌಲಿಂಗ್ ನಲ್ಲಿ ಔಟಾದರು.
ಬಳಿಕ ಕ್ರೀಸ್ ಗೆ ಬಂದ ಕನ್ನಡಿಗ ಕೆಎಲ್ ರಾಹುಲ್, ರವೀಂದ್ರ ಜಡೇಜಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಜೊತೆ 2 ಉತ್ತಮ ಜೊತೆಯಾಟವಾಡಿದರು. ಜಡೇಜಾ ಮತ್ತು ರಾಹುಲ್ ಜೋಡಿ 73 ರನ್ ಹಾಕಿ ಭಾರತದ ಇನ್ನಿಂಗ್ಸ್ ಗೆ ಜೀವ ತುಂಬಿತು. ಬಳಿಕ ರಾಹುಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಜೋಡಿ 57 ರನ್ ಗಳ ಜೊತೆಯಾಟವಾಡಿ ಭಾರತದ ರನ್ ಗಳಿಕೆಯನ್ನು 250ರ ಗಡಿ ದಾಟಿಸಿತು.
ಕೆಎಲ್ ರಾಹುಲ್ ಆಕರ್ಷಕ ಶತಕ
ರವೀಂದ್ರ ಜಡೇಜಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಔಟಾದ ಬಳಿಕ ಏಕಾಂಗಿ ಪ್ರದರ್ಶನ ನೀಡಿದ ಕೆಎಲ್ ರಾಹುಲ್ ನೋಡ ನೋಡುತ್ತಲೇ ಶತಕ ಸಿಡಿಸಿದರು. ಕೇವಲ 92 ಎಸೆತಗಳನ್ನು ಎದುರಿಸಿದ ರಾಹುಲ್ 1 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ ಅಜೇಯ 112 ರನ್ ಗಳಿಸಿ ಭಾರತದ ಸವಾಲಿನ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದರು.
Advertisement