

ಢಾಕಾ: ಕೆಕೆಆರ್ ತಂಡದಿಂದ ಮುಸ್ತಫಿಜುರ್ ರೆಹಮಾನ್ ರನ್ನು ಕೈಬಿಟ್ಟ ವಿಚಾರಕ್ಕೆ ಬಿಸಿಸಿಐ ವಿರುದ್ಧ ತೊಡೆ ತಟ್ಟಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇದೀಗ ತನ್ನದೇ ಆಟಗಾರರಿಂದ ಪ್ರತಿಭಟನೆಯ ಬಿಸಿ ಎದುರಿಸುತ್ತಿದೆ.
ಹೌದು.. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಆಟಗಾರರ ನಡುವಿನ ಭಿನ್ನಾಭಿಪ್ರಾಯದಿಂದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯಗಳು ರದ್ದಾಗಿದ್ದು, ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಇಸ್ಲಾಂರ ವಿವಾದಾತ್ಮಕ ಹೇಳಿಕೆಗಳಿಂದ ಕೆರಳಿದ ಆಟಗಾರರು ಪಟ್ಟು ಹಿಡಿದು ಅವರ ರಾಜಿನಾಮೆ ಪಡೆದಿದ್ದಾರೆ.
ನಜ್ಮುಲ್ ಇಸ್ಲಾಂ ರಾಜಿನಾಮೆಗೆ ಪಟ್ಟು ಹಿಡಿದ್ದ ಬಾಂಗ್ಲಾದೇಶ ಆಟಗಾರರು 48 ಗಂಟೆಗಳ ಅಂತಿಮ ಗಡುವು ನೀಡಿದ್ದರು. ಅಲ್ಲದೆ ರಾಜೀನಾಮೆಗೆ ಪಟ್ಟುಹಿಡಿದು, ಪಂದ್ಯಗಳನ್ನು ಬಹಿಷ್ಕರಿಸಿದ್ದರು. ಇದೀಗ ಅಂತಿಮವಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಜ್ಮುಲ್ ಇಸ್ಲಾಂರನ್ನು ಅವರ ಸ್ಥಾನದಿಂದ ವಜಾಗೊಳಿಸಿದೆ.
ಪಟ್ಟು ಸಡಿಲಿಸದ ಆಟಗಾರರು
ಅದಾಗ್ಯೂ ನಜ್ಮುಲ್ ಅವರನ್ನು ವಜಾಗೊಳಿಸಲಾಗಿದ್ದರೂ, ಆಟಗಾರರು ಲಿಖಿತ ಭರವಸೆಗಾಗಿ ಕಾಯುತ್ತಿದ್ದಾರೆ, ಇದು BPL ಭವಿಷ್ಯವನ್ನು ಅನಿಶ್ಚಿತಗೊಳಿಸಿದೆ.
ವಿವಾದ ಏಕೆ?
ಈ ಹಿಂದೆ ಟಿ20 ವಿಶ್ವಕಪ್ ಕುರಿತು ಮಾತನಾಡಿದ್ದ ನಜ್ಮುಲ್ ಇಸ್ಲಾಂ, 'ಬಾಂಗ್ಲಾದೇಶ ತಂಡವು 2026 ರ ಟಿ20 ವಿಶ್ವಕಪ್‌ನಲ್ಲಿ ಆಡದಿದ್ದರೆ ಅದು ಆಟಗಾರರಿಗೆ ಮಾತ್ರ ನಷ್ಟವನ್ನುಂಟು ಮಾಡುತ್ತದೆಯೇ ವಿನಃ ಮಂಡಳಿಗಲ್ಲ. ಮಂಡಳಿಯು ಆಟಗಾರರಿಗಾಗುವ ಯಾವುದೇ ನಷ್ಟವನ್ನು ಬರಿಸುವುದಿಲ್ಲ ಎಂದ್ದಿದ್ದರು.
ಈ ಹೇಳಿಕೆಯಿಂದ ಕೆರಳಿದ್ದ ಬಾಂಗ್ಲಾದೇಶ ಕ್ರಿಕೆಟಿಗರು ಬಿಸಿಬಿ ನಿರ್ದೇಶಕ ಮತ್ತು ಹಣಕಾಸು ಸಮಿತಿಯ ಅಧ್ಯಕ್ಷ ನಜ್ಮುಲ್ ಇಸ್ಲಾಂ ತಕ್ಷಣ ರಾಜೀನಾಮೆ ನೀಡದಿದ್ದರೆ ಎಲ್ಲಾ ರೀತಿಯ ಕ್ರಿಕೆಟ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು.
ಬಿಪಿಎಲ್ ಬಹಿಷ್ಕಾರ
ಇನ್ನು ನಜ್ಮುಲ್ ಇಸ್ಲಾಂ ಹೇಳಿಕೆ ವಿರೋಧಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ಆಟಗಾರರು ನಜ್ಮುಲ್ ಇಸ್ಲಾಂ ಅವರನ್ನು ಈ ಹುದ್ದೆಯಿಂದ ತೆಗೆದುಹಾಕದಿದ್ದರೆ, ಯಾರೂ ಕೂಡ ಕ್ರಿಕೆಟ್ ಮೈದಾನಕ್ಕೆ ಇಳಿಯುವುದಿಲ್ಲ ಎಂದು ಮಂಡಳಿಗೆ ಸವಾಲೊಡ್ಡಿದ್ದರು. ಇದರ ಪರಿಣಾಮವಾಗಿ ಇಂದು ನಡೆಯಬೇಕಿದ್ದ ಎರಡೂ ಪಂದ್ಯಗಳು ರದ್ದಾಗಿವೆ.
Advertisement