ಬುಲವಾಯೊದಲ್ಲಿ ಶನಿವಾರ ನಡೆದ U19 ವಿಶ್ವಕಪ್ ಗ್ರೂಪ್ ಬಿ ಪಂದ್ಯದ ನಂತರ ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಗಳ ನಡುವೆಯೇ ಭಾರತ ಮತ್ತು ಬಾಂಗ್ಲಾದೇಶದ ಆಟಗಾರರು ಪರಸ್ಪರ ಕೈಕುಲುಕಿದರು. ಟಾಸ್‌ನಲ್ಲಿ ವಿವಾದ ಭುಗಿಲೆದ್ದ ನಂತರ, ಇಬ್ಬರು ನಾಯಕರು ಸಾಂಪ್ರದಾಯಿಕ ಕೈಲುಕುವುದರಿಂದ ದೂರಸರಿದಿದ್ದರು. ಇದು ಕಳೆದ ವರ್ಷ ನಡೆದ ಏಷ್ಯಾ ಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾದಾಗ ಉಂಟಾಗಿದ್ದ ಉದ್ವಿಗ್ನತೆಯನ್ನು ನೆನಪಿಸಿತು. ಆದರೆ, ಹಂಗಾಮಿ ನಾಯಕ ಜವಾದ್ ಅಬ್ರಾರ್ ಅವರು ಭಾರತದ ನಾಯಕ ಆಯುಷ್ ಮ್ಹಾತ್ರೆ ಅವರೊಂದಿಗೆ ಕೈಕುಲುಕದ ನಂತರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಸ್ಪಷ್ಟೀಕರಣ ನೀಡಿತು.
ಹ್ಯಾಂಡ್‌ಶೇಕ್ ಮಾಡದಿರುವುದು 'ಸಂಪೂರ್ಣವಾಗಿ ಉದ್ದೇಶಪೂರ್ವಕವಲ್ಲ ಮತ್ತು ಏಕಾಗ್ರತೆಯ ಕ್ಷಣಿಕ ಕೊರತೆಯಿಂದ ಉಂಟಾಗಿದೆ' ಎಂದು BCB ಹೇಳಿತು.
ಭಾರತದ 18 ರನ್‌ಗಳ (ಡಕ್ವರ್ತ್ ಲೂಯಿಸ್ ವಿಧಾನ) ಜಯದ ನಂತರ, ಎರಡೂ ತಂಡಗಳು ಅಂತಿಮವಾಗಿ ಕೈಕುಲುಕಲು ಸಾಲಾಗಿ ನಿಂತು ವಿವಾದಕ್ಕೆ ಕೊನೆಹಾಡಿದವು.
ಈಮಧ್ಯೆ, ಮಳೆಯಿಂದಾಗಿ ಎರಡನೇ ಇನಿಂಗ್ಸ್ ಅನ್ನು 29 ಓವರ್‌ಗಳಿಗೆ ಇಳಿಸಿದ ನಂತರ ಭಾರತವು ಬಾಂಗ್ಲಾದೇಶದ ವಿರುದ್ಧ 18 ರನ್‌ಗಳ ರೋಚಕ ಜಯ ಸಾಧಿಸಿತು.
ಇದು ನಡೆಯುತ್ತಿರುವ ಟೂರ್ನಮೆಂಟ್‌ನಲ್ಲಿ ಭಾರತಕ್ಕೆ ಸತತ ಎರಡನೇ ಗೆಲುವು. ಇದಕ್ಕೂ ಮೊದಲು, ಆಯುಷ್ ಮ್ಹಾತ್ರೆ ನೇತೃತ್ವದ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ ಅಮೆರಿಕವನ್ನು ಸೋಲಿಸಿತು. ತಮ್ಮ ಅತ್ಯುತ್ತಮ ಬೌಲಿಂಗ್ ಪ್ರದರ್ಶನಕ್ಕಾಗಿ, ಭಾರತದ ವಿಹಾನ್ ಮಲ್ಹೋತ್ರಾ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಪಂದ್ಯದ ನಂತರ ಮಾತನಾಡಿದ ಭಾರತದ ನಾಯಕ ಮ್ಹಾತ್ರೆ, 'ಕುಂಡು ಮತ್ತು ವೈಭವ್ ಬ್ಯಾಟಿಂಗ್ ಮಾಡಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ಕೊನೆಯಲ್ಲಿ ಕನಿಷ್ಕ್ ಕೂಡ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ವಿಕೆಟ್ ಮೇಲೆ ಸ್ವಲ್ಪ ತೇವಾಂಶವಿತ್ತು. ಅದು ಕಷ್ಟಕರವಾಗಿತ್ತು. ಸರಳವಾದ ಚರ್ಚೆ ನಡೆಯಿತು. ಬಾಂಗ್ಲಾದೇಶಕ್ಕೆ ಸ್ವಲ್ಪ ಮೊಮೆಂಟಮ್ ಇದ್ದ ಕಾರಣ ಹುಡುಗರು ನಾವು ಮೊತ್ತವನ್ನು ಡಿಫೆಂಡ್ ಮಾಡಿಕೊಳ್ಳಬಹುದು ಎಂಬ ವಿಶ್ವಾಸ ಹೊಂದಿದ್ದರು. ಈ ಪರಿಸ್ಥಿತಿಯಲ್ಲಿ ಪಾರ್ಟ್-ಟೈಮರ್ ಬರುತ್ತಾರೆಂದು ಬ್ಯಾಟ್ಸ್‌ಮನ್ ನಿರೀಕ್ಷಿಸುವುದಿಲ್ಲ. ಅವರ ಕೌಶಲ್ಯದ ಬಗ್ಗೆ ನನಗೆ ಸಾಕಷ್ಟು ವಿಶ್ವಾಸವಿದೆ' ಎಂದರು.
Advertisement