

ಕರಾಚಿ: ಆಟಗಾರರ ಭದ್ರತೆಯ ದೃಷ್ಟಿಯಿಂದಾಗಿ ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯಗಳನ್ನು ಆಡಲು ನಿರಾಕರಿಸುವ ಬಾಂಗ್ಲಾದೇಶದ ನಡೆಯನ್ನು ಬೆಂಬಲಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ನಿಲುವನ್ನು ಐಸಿಸಿಗೆ ರವಾನಿಸಿದೆ ಎಂದು ವರದಿಯಾಗಿದೆ.
ಫೆಬ್ರುವರಿ 7 ರಿಂದ ಪ್ರಾರಂಭವಾಗುವ ಟೂರ್ನಮೆಂಟ್‌ಗಾಗಿ ಬಾಂಗ್ಲಾ ತಂಡವು ಭಾರತಕ್ಕೆ ಪ್ರಯಾಣಿಸುತ್ತದೆಯೇ ಎಂಬುದು ಸೇರಿದಂತೆ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಭಾಗವಹಿಸುವಿಕೆಯ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಐಸಿಸಿ ಮಂಡಳಿ ಬುಧವಾರ ಸಭೆ ಸೇರಲಿದೆ.
ಬಾಂಗ್ಲಾದೇಶ ತಂಡವು ತನ್ನ ಗುಂಪು ಹಂತದ ನಾಲ್ಕು ಪಂದ್ಯಗಳನ್ನು ಭಾರತದಲ್ಲಿ ಆಡಲಿದ್ದು, ಮೊದಲ ಮೂರು ಪಂದ್ಯಗಳು ಕೋಲ್ಕತ್ತಾದಲ್ಲಿ ಮತ್ತು ಉಳಿದ ಒಂದು ಪಂದ್ಯವನ್ನು ಮುಂಬೈನಲ್ಲಿ ಆಡಲಿದೆ.
ಆದಾಗ್ಯೂ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ಪಂದ್ಯಗಳನ್ನು ಸಹ-ಆತಿಥೇಯ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಗೆ ಮನವಿ ಮಾಡಿದೆ.
ಐಸಿಸಿ ಸಭೆಗೂ ಸ್ವಲ್ಪ ಮೊದಲು, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಗೆ ಪತ್ರವೊಂದನ್ನು ಕಳುಹಿಸಿದ್ದು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ನಿಲುವನ್ನು ತಾನು ಒಪ್ಪುತ್ತೇನೆ ಎಂದು ಹೇಳಿದೆ ಮತ್ತು ಈ ಪ್ರದೇಶದಲ್ಲಿನ ರಾಜಕೀಯ ಅಸ್ಥಿರತೆಯನ್ನು ಒಂದು ಕಾರಣವೆಂದು ಉಲ್ಲೇಖಿಸಿದೆ. 'ಇಎಸ್‌ಪಿಎನ್‌ಕ್ರಿಕ್ಇನ್ಫೊ' ಪ್ರಕಾರ, ಎಲ್ಲ ಐಸಿಸಿ ಮಂಡಳಿಯ ಸದಸ್ಯರಿಗೆ ಪತ್ರದ ಪ್ರತಿಯನ್ನು ತಲುಪಿಸಿದೆ.
ಕಳೆದ ವಾರಾಂತ್ಯದಲ್ಲಿ ಢಾಕಾದಲ್ಲಿ ನಡೆದ ಸಭೆ ಸೇರಿದಂತೆ ಐಸಿಸಿ ಮತ್ತು ಬಿಸಿಬಿ ನಡುವೆ ಈ ವಿಷಯದ ಬಗ್ಗೆ ಹಲವು ಚರ್ಚೆಗಳು ನಡೆದಿವೆ. ಆದರೆ, ಎರಡೂ ಕಡೆಯವರು ತಮ್ಮ ನಿಲುವನ್ನು ಬದಲಿಸಿಲ್ಲ.
ಐಸಿಸಿ ಪಂದ್ಯಾವಳಿಯನ್ನು ವೇಳಾಪಟ್ಟಿಯ ಪ್ರಕಾರವೇ ನಡೆಸಬೇಕೆಂದು ಒತ್ತಾಯಿಸಿದ್ದರೂ, ಬಿಸಿಬಿ ತನ್ನ ತಂಡವನ್ನು ಭಾರತಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ತನಗೆ ಬೆಂಬಲ ನೀಡುವಂತೆ ಬಾಂಗ್ಲಾದೇಶ ಸರ್ಕಾರ ಪಾಕಿಸ್ತಾನವನ್ನು ಸಂಪರ್ಕಿಸಿದೆ ಎಂದು ಮಂಡಳಿಯ ಮೂಲಗಳು ಹೇಳಿದ್ದರೂ, ಪಿಸಿಬಿ ಈ ವಿಷಯದ ಬಗ್ಗೆ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆಯನ್ನು ನೀಡಿಲ್ಲ.
ಬಿಸಿಸಿಐ ಮತ್ತು ಐಸಿಸಿ ಜೊತೆಗಿನ ಹೈಬ್ರಿಡ್ ಮಾದರಿ ಒಪ್ಪಂದದಡಿಯಲ್ಲಿ ಪಾಕಿಸ್ತಾನ 2027ರವರೆಗಿನ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ.
ಬಿಸಿಸಿಐ ನಿರ್ದೇಶನದ ಮೇರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿದ ನಂತರ ಬಾಂಗ್ಲಾದೇಶಕ್ಕೆ ಸಂಬಂಧಿಸಿದ ಬಿಕ್ಕಟ್ಟು ಪ್ರಾರಂಭವಾಯಿತು. ತರುವಾಯ, ಬಾಂಗ್ಲಾದೇಶ ಸರ್ಕಾರ ಐಪಿಎಲ್ ಪ್ರಸಾರವನ್ನು ನಿಷೇಧಿಸಿತು ಮತ್ತು ಭಾರತದಲ್ಲಿ ವಿಶ್ವಕಪ್ ಪಂದ್ಯಗಳನ್ನು ಆಡದಿರುವ ನಿರ್ಧಾರವನ್ನು ಐಸಿಸಿಗೆ ಔಪಚಾರಿಕವಾಗಿ ತಿಳಿಸಿತು.
Advertisement