

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಲಿಟ್ಟನ್ ದಾಸ್ ಅವರ ನಾಯಕತ್ವವನ್ನು ಒಂದು ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಹೇಳಿದ್ದಾರೆ.
ಸುದ್ದಿಸಂಸ್ಥೆ ANI ಜೊತೆ ಮಾತನಾಡಿದ ವಾಸನ್, ಭಾರತ ಮತ್ತು ಬಾಂಗ್ಲಾದೇಶ ನಡುವಿನ ನಡೆಯುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಬಾಂಗ್ಲಾದೇಶದ ನಾಯಕ ಹಿಂದೂ ಎಂಬ ಅಂಶವನ್ನು ಬಳಸಿಕೊಳ್ಳಬೇಕು. 2026ರ T20 ವಿಶ್ವಕಪ್‌ಗೆ ಜಾಸ್ತಿ ಸಮಯ ಇಲ್ಲದಿರುವುದರಿಂದ ಪಂದ್ಯಗಳನ್ನು ಸ್ಥಳಾಂತರಿಸುವುದು ಐಸಿಸಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಭಾರತವು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಹೊಂದಿದೆ ಮತ್ತು ಬಾಂಗ್ಲಾದೇಶವು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪಂದ್ಯಾವಳಿಯನ್ನು ಆಲಿವ್ ಶಾಖೆಯಂತೆ (ಶಾಂತಿಯ ಸೂಚಕವಾಗಿ) ಪರಿಗಣಿಸಬೇಕು ಎಂದು ಸೂಚಿಸಿದರು.
'ಇದು ಐಸಿಸಿಗೆ ಒಂದು ದುಃಸ್ವಪ್ನ. ಟಿ20 ವಿಶ್ವಕಪ್‌ಗೆ ಸಿದ್ಧತೆಗಳು ಬಹಳ ದಿನಗಳಿಂದ ನಡೆಯುತ್ತಿವೆ ಮತ್ತು ಈಗ ಪಂದ್ಯಾವಳಿ ತುಂಬಾ ಹತ್ತಿರದಲ್ಲಿ ಇರುವುದರಿಂದ ಹಾಗೆ ಮಾಡಲು ಸಾಧ್ಯವಿಲ್ಲ. ಭಾರತದಲ್ಲಿ ಯಾವುದೇ ಭದ್ರತಾ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಮ್ಮಲ್ಲಿ ಪರಿಪೂರ್ಣ ಭದ್ರತೆ ಮತ್ತು ಸುರಕ್ಷತಾ ಕ್ರಮಗಳಿವೆ. ನಿಮ್ಮ ತಂಡದ ನಾಯಕ ಹಿಂದೂ ಆಗಿದ್ದಾರೆ ಮತ್ತು ಬಾಂಗ್ಲಾದೇಶವು ಪಂದ್ಯಾವಳಿಯನ್ನು ಆಲಿವ್ ಶಾಖೆಯಾಗಿ ಬಳಸಬೇಕು ಮತ್ತು ನಡೆಯುತ್ತಿರುವ ಉದ್ವಿಗ್ನತೆಯನ್ನು ಶಮನಗೊಳಿಸಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಗುರುವಾರ ತಿಳಿಸಿದರು.
2026ರ ಟಿ20 ವಿಶ್ವಕಪ್ ನಿಗದಿಯಂತೆ ನಡೆಯಲಿದ್ದು, ಬಾಂಗ್ಲಾದೇಶದ ಪಂದ್ಯಗಳು ಭಾರತದಲ್ಲಿ ನಡೆಯಲಿವೆ ಎಂದು ಐಸಿಸಿ ಬುಧವಾರ ದೃಢಪಡಿಸಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ಕೇಳಿದ ನಂತರ ಮುಂದಿನ ದಾರಿ ಕುರಿತು ಚರ್ಚಿಸಲು ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಐಸಿಸಿ ಮಂಡಳಿಯ ಸಭೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಬಿಸಿಬಿಯ ಕಳವಳಗಳು ಐಸಿಸಿಯ ನಿಲುವಿಗೆ ಹೊಂದಿಕೆಯಾಗುವುದಿಲ್ಲ. ಕಡಿಮೆ ಸಮಯದಲ್ಲಿ ಪಂದ್ಯಗಳ ಸ್ಥಳಾಂತರವನ್ನು ನಿರೀಕ್ಷಿಸುವುದು ಅವಾಸ್ತವಿಕವಾಗಿದೆ. ಹೀಗಾಗಿಯೇ ಐಸಿಸಿಯು ಬಿಸಿಬಿಗೆ ಅಸ್ತಿತ್ವದಲ್ಲಿರುವ ಯೋಜನೆಗಳಿಗೆ ಬದ್ಧವಾಗಿರಬೇಕು ಅಥವಾ 2026ರ ಟಿ20 ವಿಶ್ವಕಪ್‌ನಿಂದ ಹೊರಗುಳಿಯಬೇಕೆಂದು ಸ್ಪಷ್ಟಪಡಿಸುತ್ತಿತ್ತು ಎಂದು ವಾಸನ್ ಹೇಳಿದರು.
'ಬಿಸಿಬಿಯ ಕಾಳಜಿಗಳು ಐಸಿಸಿಯೊಂದಿಗೆ ಹೊಂದಿಕೆಯಾಗುತ್ತವೆ ಎಂದು ನಾನು ಭಾವಿಸುವುದಿಲ್ಲ. ಈ ರೀತಿಯ ಯಾವುದೇ ತಂಡದ ಆಸೆಗಳನ್ನು ಪೂರೈಸುವುದು ಐಸಿಸಿಗೆ ಅಸಾಧ್ಯ. ನೀವು ಒಂದು ದಿನ ಎಚ್ಚರಗೊಂಡು ನಿಮ್ಮ ಪಂದ್ಯಗಳನ್ನು ಬದಲಾಯಿಸುವಂತೆ ಪತ್ರ ಬರೆಯಲು ಸಾಧ್ಯವಿಲ್ಲ. ವಿಷಯಗಳು ಈ ರೀತಿ ಆಗುವುದಿಲ್ಲ. ಐಸಿಸಿ ಅವರಿಗೆ ಸಾಲಿನಲ್ಲಿ ನಿಲ್ಲಲು ಅಥವಾ ಹೊರಹೋಗಲು ಹೇಳಿರಬೇಕು ಮತ್ತು ಬಿಸಿಬಿಗೆ ಅದು ತಿಳಿದಿದೆ ಎಂದು ನಾನು ಭಾವಿಸುತ್ತೇನೆ' ಎಂದರು.
ಬಾಂಗ್ಲಾದೇಶದ ವಿಶ್ವಕಪ್ ಪಂದ್ಯಗಳನ್ನು ಭಾರತದ ಹೊರಗೆ ಸ್ಥಳಾಂತರಿಸುವ ಮನವಿಯನ್ನು ಐಸಿಸಿ ತಿರಸ್ಕರಿಸಿದ ನಂತರ, ಐಸಿಸಿ ಪುರುಷರ ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲಿ ಆಡದಿರುವ ನಿರ್ಧಾರದಲ್ಲಿ ಬಿಸಿಬಿ ದೃಢವಾಗಿ ನಿಂತಿದೆ ಎಂದು ಬಿಸಿಬಿ ಅಧ್ಯಕ್ಷ ಅಮೀನುಲ್ ಇಸ್ಲಾಂ ಬುಲ್ಬುಲ್ ಗುರುವಾರ ದೃಢಪಡಿಸಿದರು.
Advertisement