

ಗುವಾಹತಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯ ಸಂಪೂರ್ಣ ಏಕಪಕ್ಷೀಯವಾಗಿ ಭಾರತ ಭರ್ಜರಿ 8 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ.
ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವು ಸಂಪೂರ್ಣವಾಗಿ ಅಭಿಷೇಕ್ ಶರ್ಮಾ ಅವರದ್ದಾಗಿತ್ತು. ಭಾರತ 8 ವಿಕೆಟ್‌ಗಳ ಗೆಲುವು ಸಾಧಿಸಿದ್ದು, ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೂ 2 ಪಂದ್ಯ ಬಾಕಿ ಇರುವಂತೆಯೇ ತನ್ನದಾಗಿಸಿಕೊಂಡಿದೆ.
154 ರನ್‌ಗಳ ಗುರಿಯನ್ನು ಬೆನ್ನುಹತ್ತಿದ ಭಾರತ ತಂಡ ಕೇವಲ 10 ಓವರ್‌ಗಳಲ್ಲೇ ಬೆನ್ನಟ್ಟಿತು. ಗುರಿ ಬೆನ್ನಟ್ಟುವ ವೇಳೆ ಭಾರತ ಆರಂಭಿಕ ಆಘಾತ ಎದುರಿಸಿತು. ಮೊದಲ ಎಸೆತದಲ್ಲೇ ಸಂಜು ಸ್ಯಾಮ್ಸನ್ ಡಕೌಟ್ ಆಗಿ ತೀವ್ರ ನಿರಾಶೆ ಮೂಡಿಸಿದರು. ಆದರೆ ಬಳಿಕ ಅಭಿಷೇಕ್ ಶರ್ಮಾ ಜೊತೆಗೂಡಿದ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಇಶಾನ್ ಕಿಶನ್13 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 28 ರನ್ ಸಿಡಿಸಿದರು.
ಅಭಿಷೇಕ್ ಶರ್ಮಾ ನ್ಯೂಜಿಲೆಂಡ್ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಕೇವಲ 20 ಎಸೆತಗಳಲ್ಲಿ 68 ರನ್‌ಗಳನ್ನು ಸಿಡಿಸಿದರು. ಈ ಇನ್ನಿಂಗ್ಸ್‌ನಲ್ಲಿ, ಅವರ ಸ್ಟ್ರೈಕ್ ರೇಟ್ 340 ಆಗಿತ್ತು, ಇದರಲ್ಲಿ 7 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳಿದ್ದವು.
ಈ ಜೋಡಿ 2ನೇ ಕ್ರಮಾಂಕದಲ್ಲಿ 53 ರನ್ ಕಲೆಹಾಕಿತು. ಬಳಿಕ ಅಭಿಷೇಕ್ ಶರ್ಮಾ ಜೊತೆಗೂಡಿದ ನಾಯಕ ಸೂರ್ಯ ಕುಮಾರ್ ಯಾದವ್ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಸೂರ್ಯ 26 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 57 ರನ್ ಪೇರಿಸಿ ತಂಡಕ್ಕೆ ಜಯ ತಂದಿತ್ತರು.
ಅಭಿಷೇಕ್ ಶರ್ಮಾ ಬ್ಯಾಟ್ ಚೆಕ್ ಮಾಡಿದ ಕಿವೀಸ್ ಆಟಗಾರರು!
ಈ ಅಮೋಘ ಜಯದ ಬಳಿಕ ಭಾರತದ ಬ್ಯಾಟಿಂಗ್ ಅಬ್ಬರಕ್ಕೆ ಬೆಚ್ಚಿಬಿದ್ದ ಕಿವೀಸ್ ಆಟಗಾರರು, ಪೆವಿಲಿಯನ್ ನತ್ತ ಸಾಗುತ್ತಿದ್ದ ಅಭಿಷೇಕ್ ಶರ್ಮಾರನ್ನು ತಡೆದು ಅವರ ಬ್ಯಾಟ್ ಅನ್ನು ಪರಿಶೀಲಿಸಿದರು. ಪಂದ್ಯ ಮುಗಿದ ತಕ್ಷಣ, ನ್ಯೂಜಿಲೆಂಡ್‌ನ ಡೆವೊನ್ ಕಾನ್ವೇ ಮತ್ತು ಜಾಕೋಬ್ ಡಫಿ ಅಭಿಷೇಕ್ ಶರ್ಮಾ ಅವರ ಬ್ಯಾಟ್ ಅನ್ನು ಪರಿಶೀಲಿಸಿದ್ದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು. ಕ್ಯಾಮೆರಾಗಳು ಈ ಕ್ಷಣವನ್ನು ಸೆರೆಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಬೇಗನೆ ವೈರಲ್ ಆದವು. ಸಂವಾದದ ಉದ್ದಕ್ಕೂ ಅಭಿಷೇಕ್ ನಗುತ್ತಿದ್ದರು.
ಕ್ರಿಕೆಟ್ ಆಡಿ ಅಂದ್ರೆ ವಿಡಿಯೋ ಗೇಮ್ ಆಡ್ತೀರಲ್ರೋ: ವಿಡಿಯೋಗೆ ನೆಟ್ಟಿಗರು ಟ್ರೋಲ್
ಇನ್ನು ಕಿವೀಸ್ ಆಟಗಾರರು ಅಭಿಷೇಕ್ ಶರ್ಮಾರ ಬ್ಯಾಟ್ ಚೆಕ್ ಮಾಡುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ಈ ವಿಡಿಯೋಗೆ ನೆಟ್ಟಿಗರು ವಿಡಿಯೋಗೇಮ್ ಕಾಮಿಡಿ ಕಮೆಂಟ್ ಗಳನ್ನು ಮಾಡಿ ಕಿವೀಸ್ ಆಟಗಾರರ ಕಾಲೆಳೆದಿದ್ದಾರೆ. ಕ್ರಿಕೆಟ್ ಆಡಿ ಅಂದ್ರೆ ವಿಡಿಯೋ ಗೇಮ್ ಆಡ್ತೀರಲ್ರೋ ಎಂದು ಟ್ರೋಲ್ ಮಾಡುತ್ತಿದ್ದಾರೆ.
Advertisement