

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಸರಣಿಯ ನಾಲ್ಕನೇ ಪಂದ್ಯ ಇಂದು ವಿಶಾಖಪಟ್ಟಣಂನ ಎಸಿಎ-ವಿಡಿಸಿಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಈಗಾಗಲೇ 3-0 ಮುನ್ನಡೆ ಸಾಧಿಸಿದೆ. ಆದರೆ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ.
ನ್ಯೂಜಿಲ್ಯಾಂಡ್ ಮೊದಲು ಬ್ಯಾಟಿಂಗ್ ಮಾಡಿದ್ದು ಕಿವೀಸ್ ಪರ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದರು. ನ್ಯೂಜಿಲೆಂಡ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 215 ರನ್‌ಗಳ ಬೃಹತ್ ಮೊತ್ತ ಗಳಿಸಿದ್ದು ಭಾರತಕ್ಕೆ ಗೆಲ್ಲಲು 216 ರನ್ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 18.4 ಓವರ್ ನಲ್ಲಿ 165 ರನ್ ಗಳಿಗೆ ಆಲೌಟ್ ಆಗುವ ಮೂಲಕ ನ್ಯೂಜಿಲ್ಯಾಂಡ್ ಗೆ 50 ರನ್ ಗಳಿಂದ ಶರಣಾಯಿತು.
ಕಿವೀಸ್ ಪರ ಟಿಮ್ ಸೀಫರ್ಟ್ 36 ಎಸೆತಗಳಲ್ಲಿ 62 ರನ್ ಗಳಿಸಿದರೆ, ಡೆವೊನ್ ಕಾನ್ವೇ 23 ಎಸೆತಗಳಲ್ಲಿ 44 ರನ್ ಗಳಿಸಿದರು. ಈ ಇಬ್ಬರೂ ಮೊದಲ ವಿಕೆಟ್‌ಗೆ 100 ರನ್ ಜೊತೆಯಾಟ ನೀಡಿದರು. ನಂತರ, ಡ್ಯಾರಿಲ್ ಮಿಚೆಲ್ 18 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸಿದರು. ಭಾರತದ ಪರ, ಅರ್ಷದೀಪ್ ಸಿಂಗ್ ಮತ್ತು ಕುಲ್ದೀಪ್ ಯಾದವ್ ತಲಾ ಎರಡು ವಿಕೆಟ್ ಪಡೆದರು.
ಟೀಂ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ಶಿವಂ ದುಬೆ 23 ಎಸೆತಗಳಲ್ಲಿ 65 ರನ್ ಬಾರಿಸಿದರು. ಇನ್ನುಳಿದಂತೆ ರಿಂಕು ಸಿಂಗ್ 39 ರನ್ ಬಾರಿಸಿದರೆ ಸಂಜು ಸ್ಯಾಮ್ಸನ್ 24 ರನ್ ಸಿಡಿಸಿದ್ದು ಮತ್ಯಾರೂ ಎರಡಂಕಿ ದಾಟಲಿಲ್ಲ. ನ್ಯೂಜಿಲ್ಯಾಂಡ್ ಪರ ಮಿಚೆಲ್ ಸ್ಯಾಂಟ್ನರ್ 3 ವಿಕೆಟ್, ಇಶ್ ಸೋಧಿ ಮತ್ತು ಜಾಕೋಬ್ ಡಫ್ಫಿ ತಲಾ 2 ವಿಕೆಟ್ ಪಡೆದರು.
Advertisement