

2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನವು ಭಾಗವಹಿಸುವ ಬಗ್ಗೆ ಸರ್ಕಾರದಿಂದ ಇನ್ನೂ ಅನುಮತಿ ನಿರೀಕ್ಷಿಸಲಾಗುತ್ತಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಸೂಚಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಾಂಗ್ಲಾದೇಶವನ್ನು ಪಂದ್ಯಾವಳಿಯಿಂದ ತೆಗೆದುಹಾಕಿದ ನಂತರ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವಿಕೆಯ ಬಗ್ಗೆ ಪಾಕಿಸ್ತಾನದ ನಿಲುವನ್ನು ಚರ್ಚಿಸಲು ನಖ್ವಿ ಸೋಮವಾರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿ ಮಾಡಿದರು. ಆದರೆ, ಪಂದ್ಯಾವಳಿಯಲ್ಲಿ ಭಾಗವಹಿಸುವ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಪಾಕಿಸ್ತಾನವು ಬಾಂಗ್ಲಾದೇಶದೊಂದಿಗೆ ಸಾರ್ವಜನಿಕವಾಗಿ ಒಗ್ಗಟ್ಟು ವ್ಯಕ್ತಪಡಿಸಿದೆ ಮತ್ತು ಪಂದ್ಯಾವಳಿಯನ್ನು ಅಥವಾ ನಿರ್ದಿಷ್ಟವಾಗಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಬಗ್ಗೆ ಚರ್ಚೆಗಳು ನಡೆದಿವೆ ಎಂದು ವರದಿಯಾಗಿದೆ. ಆದಾಗ್ಯೂ, ಈ ವಿಚಾರದಲ್ಲಿ ಪಾಕಿಸ್ತಾನ ಈಗಾಗಲೇ ಸಾಕಷ್ಟು ವಿಳಂಬ ಮಾಡಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರ್ಧಾರ ಸರ್ಕಾರಕ್ಕೆ ಬಿಟ್ಟಿದ್ದು. ಆದರೆ, ಪಾಕಿಸ್ತಾನ ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ತುಂಬಾ ವಿಳಂಬ ಮಾಡಿದೆ. ಪಾಕಿಸ್ತಾನವು ಪಂದ್ಯಾವಳಿಯಿಂದ ಸಂಪೂರ್ಣವಾಗಿ ಹೊರಗುಳಿಯುವುದು ಕಷ್ಟಕರವಾಗಿದ್ದರೂ, ಫೈನಲ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾದರೂ, ಭಾರತ ವಿರುದ್ಧದ ಪಂದ್ಯವನ್ನು ತಂಡ ಬಹಿಷ್ಕರಿಸಬಹುದು ಎಂದು ಲತೀಫ್ ಹೇಳಿದ್ದಾರೆ.
'ನಾವು ಭಾರತದ ವಿರುದ್ಧ ಆಡುವುದಿಲ್ಲ ಎಂದು ಸರ್ಕಾರ ಹೇಳಿದರೆ, ಐಸಿಸಿ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅವರು ಒಪ್ಪಿಕೊಳ್ಳದಿದ್ದರೆ, ನಿಜವಾದ ಮುಖಾಮುಖಿ ಆರಂಭವಾಗುವುದು ಅಲ್ಲಿಂದ' ಎಂದು ಲತೀಫ್ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ಫೈನಲ್ ತಲುಪಿದರೆ ಏನಾಗುತ್ತದೆ ಎಂದು ಕೇಳಿದಾಗ, ಪ್ರಸ್ತಾವಿತ ಪ್ರತಿಭಟನಾ ಯೋಜನೆಗೆ ಅನುಗುಣವಾಗಿ 'ನಹಿ ಖೇಲೆಂಗೆ' (ನಾವು ಆಡುವುದಿಲ್ಲ) ಎಂದು ಉತ್ತರಿಸಿದರು.
ಪಂದ್ಯಾವಳಿಯಿಂದ ಬಾಂಗ್ಲಾದೇಶವನ್ನು ಕೈಬಿಡುವ ನಿರ್ಧಾರ ಪ್ರಕಟವಾದ ತಕ್ಷಣವೇ ಪಾಕಿಸ್ತಾನ ಪಂದ್ಯಾವಳಿಯಿಂದ ಹಿಂದೆ ಸರಿಯಬೇಕಿತ್ತು. 'ಸ್ಟ್ರೈಕ್ ಮಾಡುವ ಸಮಯ ಕಳೆದಿದೆ. ಪ್ರತಿಯೊಂದು ನಿರ್ಧಾರಕ್ಕೂ ಒಂದು ಸಮಯವಿದೆ. ಕಬ್ಬಿಣ ಬಿಸಿಯಾಗಿರುವಾಗಲೇ ನೀವು ತಟ್ಟಬೇಕು. ಆ ಸಮಯ ಕಳೆದ ವಾರ ನಡೆದ ಐಸಿಸಿ ಸಭೆಯ ವೇಳೆ ಚೆನ್ನಾಗಿತ್ತು' ಎಂದು ಲತೀಫ್ ಯೂಟ್ಯೂಬ್ ಚಾನೆಲ್ ಕಾಟ್‌ಬಿಹೈಂಡ್‌ನಲ್ಲಿ ಟೀಕಿಸಿದ್ದಾರೆ.
'ನಾವು ನಮ್ಮ ಬೆಂಬಲ ನೀಡಿದ್ದೇವೆ. ನಾವು ಅವರಿಗೆ ಮತ ಹಾಕಿದ್ದೇವೆ. ಆ ಅಧ್ಯಾಯ ಮುಗಿದಿದೆ. ನಾವು ಈಗ ಬಹಿಷ್ಕರಿಸಿದರೆ, ಅದರಿಂದ ಅದೇ ಪರಿಣಾಮ ಬೀರುವುದಿಲ್ಲ' ಎಂದು ಅವರು ಹೇಳಿದರು.
2026ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ಈ ಶುಕ್ರವಾರ ಅಥವಾ ಮುಂದಿನ ಸೋಮವಾರ ದೃಢೀಕರಿಸಲಾಗುವುದು ಎಂದು ಅಧ್ಯಕ್ಷ ನಖ್ವಿ ಹೇಳಿದ್ದಾರೆ.
Advertisement