

ಮುಲ್ಲನ್‌ಪುರ: ಮುಲ್ಲಾನ್‌ಪುರದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಹಾಗೂ 300 ರನ್‌ಗಳ ಭಾರೀ ಅಂತರದಿಂದ ಮಣಿಸಿದ್ದು ಆ ಮೂಲಕ ತನ್ನ 93 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತಿದೊಡ್ಡ ಇನ್ನಿಂಗ್ಸ್ ಜಯ ದಾಖಲಿಸಿದೆ.
ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ನೀಡಿದ್ದ 564 ರನ್ ಗಳಿಗೆ ಉತ್ತರ ನೀಡಲು ಅಫ್ಘಾನಿಸ್ತಾನ ತನ್ನ ಎರಡೂ ಇನ್ನಿಂಗ್ಸ್ ನಲ್ಲಿ ತಿಣುಕಾಡಿತು.
ಭಾರತೀಯ ಬೌಲರ್ ಗಳ ಪಾರಮ್ಯದ ಎದುರು ರನ್ ಗಳಿಸಲು ಹರಸಾಹಸ ಪಟ್ಟ ಆಪ್ಘನ್ನರು ಮೊದಲ ಇನ್ನಿಂಗ್ಸ್ ನಲ್ಲಿ 152 ರನ್ ಗಳಿಸಿ ಆಲೌಟ್ ಆದರೆ, 2ನೇ ಇನ್ನಿಂಗ್ಸ್ ನಲ್ಲಿ ಕೇವಲ 112 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ ಈ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 300 ರನ್ ಗಳ ಅಂತರದ ಐತಿಹಾಸಿಕ ಜಯ ಸಾಧಿಸಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ 36 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರೆ, ಕುಲದೀಪ್ ಯಾದವ್ 30 ರನ್ ನೀಡಿ 3 ವಿಕೆಟ್ ಕಬಳಿಸಿ ಉತ್ತಮ ಬೆಂಬಲ ನೀಡಿದರು. 2018ರಲ್ಲಿ ಭಾರತ ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 262 ರನ್‌ಗಳಿಂದ ಸೋಲಿಸಿತ್ತು. ಆದರೆ ಈ ಬಾರಿ ಅಫ್ಘಾನಿಸ್ತಾನ ಪಂದ್ಯವನ್ನು ಕನಿಷ್ಠ ಮೂರನೇ ದಿನದವರೆಗೆ ಕೊಂಡೊಯ್ದಿದ್ದೇ ಅದರ ದೊಡ್ಡ ಸಾಧನೆ ಎನ್ನಬಹುದು.
ಭಾರತಕ್ಕೆ ಐತಿಹಾಸಿಕ ಗೆಲುವು, 93 ವರ್ಷಗಲ್ಲಿ ಇದೇ ಮೊದಲು
ಇನ್ನು ಇಂದು ಭಾರತಕ್ಕೆ ಸಿಕ್ಕ ಈ ಗೆಲುವು ಭಾರತದ 93 ಟೆಸ್ಟ್ ಕ್ರಿಕೆಟ್ ಇತಿಹಾಸದ ಅತೀ ದೊಡ್ಡ ಗೆಲುವಾಗಿದೆ. ಏಕಪಕ್ಷೀಯವಾಗಿ ನಡೆದ ಈ ಪಂದ್ಯವು ಭಾರತದ ಸಮೃದ್ಧ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಸುವರ್ಣ ಅಧ್ಯಾಯವನ್ನು ಸೇರಿಸಿತು.
ವಿಶೇಷವೆಂದರೆ, 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಅಫ್ಘಾನಿಸ್ತಾನದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೂ ಭಾರತ ಇನ್ನಿಂಗ್ಸ್ ಹಾಗೂ 262 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು. ಆದರೆ ಮುಲ್ಲನ್‌ಪುರದಲ್ಲಿ ದಾಖಲಾದ ಈ ಗೆಲುವು, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಇದುವರೆಗೆ ದಾಖಲಿಸಿರುವ ಅತಿದೊಡ್ಡ ಇನ್ನಿಂಗ್ಸ್ ಜಯವಾಗಿ ಹೊಸ ಇತಿಹಾಸ ನಿರ್ಮಿಸಿದೆ.
8 ವರ್ಷಗಳ ದಾಖಲೆಯೂ ಪತನ
ಅಂತೆಯೇ ಇದು ಭಾರತಕ್ಕೆ ಟೆಸ್ಟ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವಾಗಿದ್ದು, ತನ್ನದೇ ಆದ 8 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಇದಕ್ಕೂ ಮೊದಲು, ಭಾರತದ ಅತಿದೊಡ್ಡ ಟೆಸ್ಟ್ ಗೆಲುವು 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಂದಿತ್ತು. ಆ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 272 ರನ್‌ಗಳಿಂದ ಗೆಲುವು ಸಾಧಿಸಿತ್ತು. ಅಂದರೆ, ಭಾರತ ತಂಡ ತನ್ನದೇ ಆದ ಎಂಟು ವರ್ಷಗಳ ಹಳೆಯ ಅತಿದೊಡ್ಡ ಟೆಸ್ಟ್ ಗೆಲುವಿನ ದಾಖಲೆಯನ್ನು ಮುರಿದಿದೆ.
ಇದು ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ ದಾಖಲಿಸಿದ ಅತಿದೊಡ್ಡ ಗೆಲುವು ಕೂಡ ಹೌದು. ಇದಕ್ಕೂ ಮೊದಲು, 2018 ರಲ್ಲಿ ಬೆಂಗಳೂರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ, ಅಫ್ಘಾನಿಸ್ತಾನವನ್ನು ಇನ್ನಿಂಗ್ಸ್ ಮತ್ತು 262 ರನ್‌ಗಳಿಂದ ಸೋಲಿಸಿತ್ತು. ಇದರರ್ಥ ಭಾರತ ಇದುವರೆಗೆ ಅಫ್ಘಾನಿಸ್ತಾನ ವಿರುದ್ಧದ ಎರಡೂ ಟೆಸ್ಟ್‌ಗಳನ್ನು ಇನ್ನಿಂಗ್ಸ್ ಅಂತರದಿಂದ ಗೆದ್ದಿದೆ.
ಭಾರತದ ಅತಿದೊಡ್ಡ ಇನ್ನಿಂಗ್ಸ್ ಗೆಲುವುಗಳು
ಅಫ್ಘಾನಿಸ್ತಾನ ವಿರುದ್ಧ ಇನ್ನಿಂಗ್ಸ್ ಮತ್ತು 300 ರನ್, ಮುಲ್ಲಾನ್‌ಪುರ (2026)*
ವೆಸ್ಟ್ ಇಂಡೀಸ್ ವಿರುದ್ಧ ಇನ್ನಿಂಗ್ಸ್ ಮತ್ತು 272 ರನ್, ರಾಜ್‌ಕೋಟ್ (2018)
ಅಫ್ಘಾನಿಸ್ತಾನ ವಿರುದ್ಧ ಇನ್ನಿಂಗ್ಸ್ ಮತ್ತು 262 ರನ್, ಬೆಂಗಳೂರು (2018)
ಬಾಂಗ್ಲಾದೇಶ ವಿರುದ್ಧ ಇನ್ನಿಂಗ್ಸ್ ಮತ್ತು 239 ರನ್, ಮಿರ್ಪುರ್ (2007)
ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಮತ್ತು 239 ರನ್, ನಾಗ್ಪುರ (2017)
ಭಾರತದ ಬಲಾಬಲ ಪರೀಕ್ಷೆ
ಈ ಭರ್ಜರಿ ಜಯವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯ ಮೇಲೆ ಯಾವುದೇ ಪರಿಣಾಮ ಬೀರದಿದ್ದರೂ, ಪ್ರಸ್ತುತ ಡಬ್ಲ್ಯುಟಿಸಿಯಲ್ಲಿ ಅಫ್ಘಾನಿಸ್ತಾನ ಭಾಗಿಯಾಗಿಲ್ಲದ ಕಾರಣ, ಈ ಪಂದ್ಯ ಭಾರತಕ್ಕೆ ತನ್ನ ಬೆಂಚ್ ಸ್ಟ್ರೆಂಗ್ತ್ ಅನ್ನು ಪರೀಕ್ಷಿಸಿಕೊಳ್ಳಲು ಮತ್ತು ಭವಿಷ್ಯದ ಪ್ರತಿಭೆಗಳನ್ನು ಗುರುತಿಸಲು ಉತ್ತಮ ಅವಕಾಶವಾಗಿ ಪರಿಣಮಿಸಿತು.
ಕಳೆಗುಂದಿದ ಆಫ್ಘನ್ ಬ್ಯಾಟಿಂಗ್
ಅಫ್ಘಾನಿಸ್ತಾನದ ಬ್ಯಾಟಿಂಗ್ ಬಗ್ಗೆ ಹೇಳುವುದಾದರೆ, ಅನುಭವ ಮತ್ತು ಕೌಶಲ್ಯದ ಕೊರತೆ ಸ್ಪಷ್ಟವಾಗಿ ಗೋಚರಿಸಿತು. ವಿಶೇಷವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತೀಯ ಸ್ಪಿನ್ನರ್‌ಗಳಿಗೆ ಅವರು ನೀಡಿದ ದುರ್ಬಲ ಶಾಟ್ ಆಯ್ಕೆಗಳು ವಿಕೆಟ್ ಕಳೆದುಕೊಳ್ಳಲು ಪ್ರಮುಖ ಕಾರಣವಾದವು. ಮೊದಲ ಇನ್ನಿಂಗ್ಸ್‌ನಲ್ಲಿ 152 ರನ್‌ಗಳಿಗೆ ಆಲೌಟ್ ಆದ ನಂತರವೂ ಅವರು ಪರಿಸ್ಥಿತಿಗೆ ತಕ್ಕಂತೆ ಆಡದೆ ಅತಿಯಾದ ಆಕ್ರಮಣಕಾರಿ ಹೊಡೆತಗಳಿಗೆ ಮುಂದಾದರು.
ಈ ವರ್ಷದ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಿರುವ ಎಡಗೈ ಆರಂಭಿಕ ಬ್ಯಾಟರ್ ಸೆದಿಕುಲ್ಲಾ ಅತಲ್ (42) ಚಹಾ ವಿರಾಮಕ್ಕೂ ಮುನ್ನದ ಕೊನೆಯ ಎಸೆತದಲ್ಲಿ ವಾಷಿಂಗ್ಟನ್ ಸುಂದರ್ ವಿರುದ್ಧ ಟರ್ನ್‌ಗೆ ವಿರುದ್ಧವಾಗಿ ಹೊಡೆಯಲು ಯತ್ನಿಸಿ, ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಮೊಹಮ್ಮದ್ ಸಿರಾಜ್ ಗೆ ಸುಲಭ ಕ್ಯಾಚ್ ನೀಡಿ ಔಟಾದರು.
ಇತ್ತ ರಹ್ಮಾನುಲ್ಲಾ ಗುರ್ಬಾಜ್ (24) ಕೂಡ ಆಕ್ರಮಣಕಾರಿ ಆಟದ ಮೂಲಕ ಒತ್ತಡದಿಂದ ಹೊರಬರಲು ಯತ್ನಿಸಿದರು. ಆಗ ನಾಯಕ ಶುಭ್‌ಮನ್ ಗಿಲ್, ಕುಲದೀಪ್ ಯಾದವ್ ಬೌಲಿಂಗ್ ವೇಳೆ ಸಿರಾಜ್ ಅವರನ್ನು ಲಾಂಗ್ ಆನ್ ಗಡಿಯಲ್ಲಿ ನಿಲ್ಲಿಸಿ, ಗುರ್ಬಾಜ್ ಅವರನ್ನು ಗಾಳಿಯಲ್ಲಿ ಹೊಡೆಯುವಂತೆ ಪ್ರೇರೇಪಿಸಿದರು.
ಈ ತಂತ್ರ ಕೂಡ ತಕ್ಷಣವೇ ಫಲ ನೀಡಿತು. ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ರಹಮತ್ ಶಾ (13) ಕೂಡ ವಾಷಿಂಗ್ಟನ್ ಸುಂದರ್ ವಿರುದ್ಧ ಮಿಡ್‌ಆಫ್ ಮೇಲಿಂದ ಚೆಂಡನ್ನು ಎತ್ತಿ ಹೊಡೆಯಲು ಯತ್ನಿಸಿ, ಆ ದಿನದ ಹೀರೋ ಮಾನವ್ ಸುಥಾರ್ ಅವರ ಕೈಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
Advertisement