

ನವದೆಹಲಿ: ಟಿ-20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಕೇವಲ 36 ಗಂಟೆಗಳ ಇಂಗ್ಲೆಂಡ್ ಕ್ರಿಕೆಟ್ ತಂಡ ಸ್ವದೇಶಕ್ಕೆ ಮರಳಿದರೆ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾದಂತಹ ರಾಷ್ಟ್ರಗಳು ಇನ್ನೂ ಭಾರತದಲ್ಲಿಯೇ ಇವೆ ಎಂದು ವರದಿಯಾಗಿದೆ.
ಮಾರ್ಚ್ 01 ರಂದು ಭಾರತ ವಿರುದ್ಧದ ಸೂಪರ್ 8 ಸೋಲಿನ ನಂತರ ವೆಸ್ಟ್ ಇಂಡೀಸ್ ಟೂರ್ನಿಯಿಂದ ಹೊರಬಿದ್ದಿತ್ತು.
ಮತ್ತೊಂದೆಡೆ ದಕ್ಷಿಣ ಆಫ್ರಿಕಾ ತಂಡ ಮಾ. 04 ರಂದು ಸೆಮಿ-ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತು ಟೂರ್ನಿಯಿಂದ ನಿರ್ಗಮಿಸಿತ್ತು. ಆದರೂ, ಇರಾನ್‌ನೊಂದಿಗಿನ ಯುಎಸ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ವಾಯುಪ್ರದೇಶದ ನಿರ್ಬಂಧಗಳ ಕಾರಣದಿಂದಾಗಿ ಈ ಎರಡು ರಾಷ್ಟ್ರಗಳ ಆಟಗಾರರು ಭಾರತದಲ್ಲಿಯೇ ಉಳಿದಿದ್ದಾರೆ.
ಈ ಸುಧೀರ್ಘ ವಿಳಂಬದ ಬಗ್ಗೆ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾಘನ್ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯನ್ನು ಪ್ರಶ್ನಿಸಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕಾಯುತ್ತಿರುವಾಗ ಇಂಗ್ಲೆಂಡ್ ಹೇಗೆ ಬೇಗ ಹೊರಡಲು ಸಾಧ್ಯವಾಯಿತು ಎಂದು ಕೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪೋಸ್ಟ್ ಮಾಡಿದ್ದು, ಮಾರ್ಚ್ 1 ರಂದು ವೆಸ್ಟ್ ಇಂಡೀಸ್ ವಿಶ್ವಕಪ್‌ನಿಂದ ಹೊರಬಿದ್ದಿದೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಈಗ ಮಾರ್ಚ್ 9. ಅವರು ಇನ್ನೂ ಕೋಲ್ಕತ್ತಾದಲ್ಲಿಯೇ ಇದ್ದಾರೆ.
ದಕ್ಷಿಣ ಆಫ್ರಿಕಾ ಪರಿಸ್ಥಿತಿ ಕೂಡಾ ಅದೇ ಆಗಿದೆ. ಇದು ಸರಿಯಲ್ಲ. ಇಂಗ್ಲೆಂಡ್ 36 ಗಂಟೆಗಳಲ್ಲಿ ಸ್ವದೇಶಕ್ಕೆ ಮರಳಲು ಸಾಧ್ಯವಾದರೆ ಇದೇ ಪರಿಸ್ಥಿತಿ ಎಲ್ಲಾ ತಂಡಗಳಿಗೆ ಯಾಕೆ ಸಾಧ್ಯವಾಗಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement