

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮೊದಲ ಅಧ್ಯಕ್ಷ ಲಲಿತ್ ಮೋದಿ, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ದಾಖಲೆಯ ಮಾರಾಟದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಲಕ್ನೋ ಸೂಪರ್ ಜೈಂಟ್ಸ್ (LSG) ಮಾಲೀಕ ಸಂಜೀವ್ ಗೋಯೆಂಕಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಲ್ ಸೋಮಾನಿ ನೇತೃತ್ವದ ಒಕ್ಕೂಟವು RR ಅನ್ನು 1.63 ಬಿಲಿಯನ್ ಡಾಲರ್‌ಗಳಿಗೆ ಖರೀದಿಸಿದರೆ, ಆದಿತ್ಯ ಬಿರ್ಲಾ ಗ್ರೂಪ್, ಬ್ಲಾಕ್‌ಸ್ಟೋನ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಮತ್ತು ಬೋಲ್ಟ್ ವೆಂಚರ್ಸ್‌ಗಳನ್ನು ಒಳಗೊಂಡ ಒಕ್ಕೂಟವು 1.78 ಬಿಲಿಯನ್ ಡಾಲರ್‌ಗಳಿಗೆ ಸ್ವಾಧೀನಪಡಿಸಿಕೊಂಡ ನಂತರ RCB ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಫ್ರಾಂಚೈಸಿಯಾಯಿತು. ಇತ್ತೀಚಿನ ವರ್ಷಗಳಲ್ಲಿ ಲೀಗ್‌ನ ರಚನೆ, ವಿಶೇಷವಾಗಿ ಅದರ ಮಾಧ್ಯಮ ಹಕ್ಕುಗಳ ಮಾದರಿಯಿಂದಲೇ ಐಪಿಎಲ್‌ನ ಮೌಲ್ಯ ಬೆಳೆಯುತ್ತಿದ್ದು, ಇದಕ್ಕೆ ಜಯ್ ಶಾ ಕಾರಣ ಎಂಬರ್ಥದಲ್ಲಿ ಸಂಜೀವ್ ಗೋಯೆಂಕಾ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಲಲಿತ್ ಮೋದಿ, ಗೋಯೆಂಕಾ ಅವರನ್ನು 'ವಿದೂಷಕ' ಎಂದು ಕರೆದರು ಮತ್ತು ಅವರಿಗೆ 'ನೆನಪಿನ ಶಕ್ತಿ' ಇಲ್ಲ ಎಂದು ಹೇಳಿದರು.
'ಈ ವ್ಯಕ್ತಿ ಮೂಲತಃ ಐಪಿಎಲ್ ಸೃಷ್ಟಿಸಿದ ಅಥವಾ ಅಭಿವೃದ್ಧಿಪಡಿಸಿದವರು ಯಾರು ಎಂಬುದನ್ನು ಮರೆತಿದ್ದಾರೆ. ಅದು ಸರಿ. ಅವರು ತನ್ನದೇ ಆದ ಲೋಕದಲ್ಲಿ ಬದುಕುತ್ತಿದ್ದಾರೆ ಮತ್ತು ವಾಸ್ತವದಿಂದ ದೂರ ಉಳಿದಿದ್ದಾರೆ. ಸಂಜೀವ್ ಗೋಯೆಂಕಾ ಒಬ್ಬ (ವಿದೂಷಕ ಎಮೋಜಿ). ನನಗೆ ಹರ್ಷ್ ಗೋಯೆಂಕಾ (ಸಂಜೀವ್ ಅವರ ಸಹೋದರ) ಅವರನ್ನು ಮಾಲೀಕರಾಗಿ ನೋಡಲು ಇಷ್ಟಪಡುತ್ತೇನೆ. ಏಕೆಂದರೆ, ಅವರು ನಿಜವಾದ ಕ್ರಿಕೆಟ್ ಅಭಿಮಾನಿ. ಈ ವಿದೂಷಕನಲ್ಲ- ತನ್ನ ಟ್ವೀಟ್ ಇತಿಹಾಸವನ್ನು ಬದಲಾಯಿಸುತ್ತದೆ ಎಂದು ಭಾವಿಸಿರುವಂತಿದೆ. ಅವರಿಗೆ ಶೂನ್ಯ ಜ್ಞಾನವಿದೆ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಆ ವ್ಯಕ್ತಿಗೆ ಸೊಕ್ಕಿದೆ. ಜೈ ಹಿಂದ್' ಎಂದು ಲಲಿತ್ ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೂ ಮೊದಲು, ಫ್ರಾಂಚೈಸಿಗಳ ದಾಖಲೆಯ ಮಾರಾಟಕ್ಕೆ ಗೋಯೆಂಕಾ ಪ್ರತಿಕ್ರಿಯಿಸಿ ಲೀಗ್ ಆಡಳಿತದ ಬಗ್ಗೆ ವಿಶೇಷ ಉಲ್ಲೇಖ ಮಾಡಿದರು.
'2008ರಲ್ಲಿ ಸರಿಸುಮಾರು ₹270 ಕೋಟಿಗೆ ಸ್ವಾಧೀನಪಡಿಸಿಕೊಂಡ ರಾಜಸ್ಥಾನ್ ರಾಯಲ್ಸ್ ತಂಡವು ಇದೀಗ ₹15,000 ಕೋಟಿಗೂ ಹೆಚ್ಚು ಬೆಲೆಗೆ ಮಾರಾಟವಾಗಿದೆ. ಸರಿಸುಮಾರು ₹485 ಕೋಟಿಗೆ ಸ್ವಾಧೀನಪಡಿಸಿಕೊಂಡ ಆರ್‌ಸಿಬಿ, ₹16,600 ಕೋಟಿಗೂ ಹೆಚ್ಚು ಬೆಲೆಗೆ ಮಾರಾಟವಾಗಿದೆ. ಒಂದೇ ವಾರದಲ್ಲಿ ಎರಡು ಫ್ರಾಂಚೈಸಿಗಳು, ತಲಾ ₹15,000 ಕೋಟಿಗಿಂತ ಹೆಚ್ಚು ಮೌಲ್ಯಕ್ಕೆ ಮಾರಾಟವಾಗಿವೆ' ಎಂದು ಗೋಯೆಂಕಾ X ನಲ್ಲಿ ಬರೆದಿದ್ದಾರೆ.
'ಆ ಮೌಲ್ಯವು ಐಪಿಎಲ್‌ನ ವಾಸ್ತುಶಿಲ್ಪದಿಂದ ನಿರ್ಮಾಣಗೊಂಡಿದೆ. ಪ್ರಸಾರ ಮತ್ತು ಡಿಜಿಟಲ್ ಹಕ್ಕುಗಳನ್ನು ಹೇಗೆ ರಚಿಸಲಾಗಿದೆ ಎಂಬುದು ಮುಖ್ಯ. ಪ್ರೀಮಿಯಂ ಮಟ್ಟದಲ್ಲಿ ಹೂಡಿಕೆ ಮಾಡಲು ಬ್ರ್ಯಾಂಡ್‌ಗಳಿಗೆ ಆಡಳಿತ ವಿಶ್ವಾಸ ನೀಡಿದೆ. ಇದರಲ್ಲಿ ಹೆಚ್ಚಿನವು ಜಯ್ ಶಾ ಅವರ ದೃಷ್ಟಿಕೋನದಿಂದ ಸಾಧ್ಯವಾಗಿದೆ' ಎಂದಿದ್ದರು.
ತೆರಿಗೆ ವಂಚನೆ, ಹಣ ವರ್ಗಾವಣೆ ಮತ್ತು ಐಪಿಎಲ್‌ನ ಪ್ರಾಕ್ಸಿ ಮಾಲೀಕತ್ವಕ್ಕೆ ಸಂಬಂಧಿಸಿದ ಆರೋಪಗಳ ಸುಳಿಯಲ್ಲಿ ಸಿಲುಕಿರುವ ಲಲಿತ್ ಮೋದಿ 2010 ರಲ್ಲಿ ಭಾರತವನ್ನು ತೊರೆದರು. ಲಲಿತ್ ಮೋದಿ 2009 ರಲ್ಲಿ ಐಪಿಎಲ್ ಪ್ರಸಾರ ಹಕ್ಕುಗಳನ್ನು ನೀಡುವ ಪ್ರಕ್ರಿಯೆಯನ್ನು ₹125 ಕೋಟಿಗೂ ಹೆಚ್ಚು ಲಂಚ ಪಡೆದು ತಿರುಚಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.
Advertisement